
ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿಗೆ ಬೀಳ್ಕೊಡುಗೆ
ಮೈಸೂರು: ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ)ದ ವತಿಯಿಂದ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ರಜನಿ ನರಹಳ್ಳಿ ಅವರು ರಚಿಸಿರುವ ಸಹಬಾಳ್ವೆ' ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎನ್.ಕೆ. ಲೋಕನಾಥ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಡಾ. ಬಿ.ಆರ್. ಜಯಕುಮಾರಿ ಅವರ ಸರಳ ಯೋಚನಾ ಶೈಲಿ ಹಾಗೂ ದಕ್ಷತೆ ಎಲ್ಲರಿಗೂ ಮಾದರಿ. ಕೋವಿಡ್ ಸಂಕಷ್ಟದ ಸಮಯದಲ್ಲಿ ಆಡಳಿತಾತ್ಮಕ ಬದಲಾವಣೆಗಳನ್ನು ಅವರು ಅತ್ಯಂತ ಕಟ್ಟುನಿಟ್ಟಾಗಿ ನಿಭಾಯಿಸಿದ್ದನ್ನು ಸ್ಮರಿಸಿದರು. ಹಳ್ಳಿಯಿಂದ ಬಂದು ಕಷ್ಟಪಟ್ಟು ಓದಿ ಅನೇಕ ಏಳು-ಬೀಳುಗಳ ನಡುವೆ ಅವರು ಮಾಡಿದ ಸಾಧನೆಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ. ತಮ್ಮಲ್ಲಿದ್ದ ಅಪಾರ ಸಾಹಿತ್ಯ ಜ್ಞಾನದಿಂದ ಕಾಲೇಜಿನ ಕಠಿಣ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು ಅವರ ಮುಂದಿನ ಬದುಕು ಆರೋಗ್ಯಕರವಾಗಿರಲಿ ಎಂದು ಶುಭ ಹಾರೈಸಿದರು. ಕೃತಿ ಕುರಿತು ಮಾತನಾಡಿದ ಸಾಹಿತಿಗಳಾದ ಪ್ರೊ. ಮೈಸೂರು ಕೃಷ್ಣಮೂರ್ತಿ ಅವರು, ಡಾ. ಬಿ.ಆರ್. ಜಯಕುಮಾರಿ ಹಾಗೂ ಅವರ ಪತಿ, ಮಹಾಜನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು, ಚಿಂತಕ ಹಾಗೂ ಸಮಾಜ ಸೇವಕರಾದ ಡಾ. ಎಚ್.ಆರ್. ತಿಮ್ಮೇಗೌಡ ಅವರ ಸುಂದರ ದಾಂಪತ್ಯ ಜೀವನದ ಮಾದರಿಯನ್ನು ಅತ್ಯಂತ ಮುಕ್ತಕಂಠದಿAದ ಶ್ಲಾಘಿಸಿದರು. ಒಂದು ಆದರ್ಶ ಕುಟುಂಬವು ಸಮಾಜಕ್ಕೆ ಹೇಗೆ ದಾರಿದೀಪವಾಗಬಲ್ಲದು ಎಂಬುದಕ್ಕೆ ಈ ದಂಪತಿಗಳ ಯಶಸ್ವಿ ಬದುಕೇ ಜೀವಂತ ನಿದರ್ಶನ ಎಂದರು. ಅಭಿನAದನಾ ನುಡಿಗಳನ್ನಾಡಿದ ಖ್ಯಾತ ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ, ಬುದ್ಧಿ ಮತ್ತು ಭಾವನೆಗಳನ್ನು ಸಮತೋಲನದಲ್ಲಿ ತೆಗೆದುಕೊಂಡು ಹೋದಾಗ ಮಾತ್ರ ಜಯಕುಮಾರಿ ಅವರಂತೆ ಯಶಸ್ವಿ ದಾಂಪತ್ಯ ಹಾಗೂ ಆಡಳಿತ ನಡೆಸಲು ಸಾಧ್ಯ. ಆಡಳಿತದ ಅನಗತ್ಯ ಪ್ರದರ್ಶನ ಎಲ್ಲಿ ಕಡಿಮೆ ಇರುತ್ತದೋ ಅದೇ ನಿಜವಾದ ಆಡಳಿತ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾದ ಬೆಂಗಳೂರಿನ ಸಾಹಿತಿ ರಜನಿ ನರಹಳ್ಳಿ ಅವರು, ಡಾ. ಎಚ್.ಆರ್. ತಿಮ್ಮೇಗೌಡರ ಬದುಕಿನ ಉನ್ನತ ಮೌಲ್ಯಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿಯೇ ತಾವು ಸಹಬಾಳ್ವೆ’ ಪುಸ್ತಕವನ್ನು ರಚಿಸಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಟಿ. ವಿಜಯಲಕ್ಷಿö್ಮ ಮುರಳೀಧರ್ ವಹಿಸಿದ್ದರು. ಆಡಳಿತಾಧಿಕಾರಿ ಪ್ರೊ. ಪಿ. ಸರೋಜಮ್ಮ, ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್.ಆರ್. ರಮೇಶ್, ಶೈಕ್ಷಣಿಕ ಡೀನ್ ಡಾ ಶ್ರೀಧರ್ ಹೆಚ್, ಸಂಚಾಲಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು, ಸಾಹಿತಿ ಪ್ರೊ. ಎ. ರಂಗಸ್ವಾಮಿ ಹಾಜರಿದ್ದರು.