Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ: ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ


ಮೈಸೂರು; ಲೋಕಾಯುಕ್ತ ಸಂಸ್ಥೆ ಸ್ಥಾಪನೆಯಾಗಿ ಸುಮಾರು ನಾಲ್ಕು ದಶಕಗಳು ಕಳೆದಿದ್ದರೂ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಇಂದಿಗೂ ಭ್ರಷ್ಟಾಚಾರ ಸಮಾಜದಲ್ಲಿ ಮುಂದುವರಿದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹೇಳಿದರು.
ಶುಕ್ರವಾರ ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ ಎಂಬುದು ಆತಂಕಕಾರಿ ಸಂಗತಿ. ಈ ಪರಿಸ್ಥಿತಿಯಿಂದ ಹೊರಬರಲು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆ ಹೆಚ್ಚಾಗಬೇಕು. ಭ್ರಷ್ಟಾಚಾರವನ್ನು ತಡೆಗಟ್ಟುವುದು, ಸಾರ್ವಜನಿಕರ ನೆಮ್ಮದಿ ಕಾಪಾಡುವುದು ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಪವಿತ್ರ ಜವಾಬ್ದಾರಿಗಳನ್ನು ನಿರ್ವಹಿಸುವ ಇಲಾಖೆಗಳಲ್ಲಿರುವ ಅಧಿಕಾರಿಗಳು ಹಾಗೂ ನೌಕರರು ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು. ಲಂಚ ಸ್ವೀಕರಿಸದಿರುವುದು ಮತ್ತು ಲಂಚ ನೀಡದಿರುವುದು ಮಾತ್ರ ಪ್ರಾಮಾಣಿಕತೆಯ ಸಂಪೂರ್ಣ ಅರ್ಥವಲ್ಲ. ನಿಗದಿತ ಸಮಯಕ್ಕೆ ಕಚೇರಿಗೆ ಬಂದು ಕೆಲಸ ನಿರ್ವಹಿಸುವುದಷ್ಟೇ ಕರ್ತವ್ಯವೂ ಅಲ್ಲ. ಇವುಗಳಿಗಿಂತ ಮಿಗಿಲಾಗಿ ಮಾನವೀಯ ಮೌಲ್ಯಗಳು ನಮ್ಮಲ್ಲಿರಬೇಕು. ಅವುಗಳನ್ನು ನಮ್ಮ ದೈನಂದಿನ ಕೆಲಸ ಮತ್ತು ಸಾರ್ವಜನಿಕ ಸೇವೆಯೊಂದಿಗೆ ಬೆಸೆಯಬೇಕು ಎಂದು ಹೇಳಿದರು.
ಪ್ರಸ್ತುತ ಅನೇಕರು ಕೆಸಿಎಸ್‌ಆರ್ ಸೇರಿದಂತೆ ಸೇವಾ ನಿಯಮಗಳ ಚೌಕಟ್ಟಿನೊಳಗೆ ಮಾತ್ರ ತಮ್ಮ ಕರ್ತವ್ಯವನ್ನು ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ. ಕಾನೂನು ಮತ್ತು ನಿಯಮಗಳು ಎಷ್ಟು ಹೇಳುತ್ತವೆಯೋ ಅಷ್ಟನ್ನೇ ಪಾಲಿಸುವ ಮನೋಭಾವದಿಂದ ಹೊರಬರಬೇಕು. ಕಾನೂನಿನ ಪಾಲನೆಯ ಜೊತೆಗೆ ಮಾನವೀಯ ಗುಣಗಳು, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಕಾಳಜಿ ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸನ್ನಡತೆ ಮತ್ತು ಪ್ರಾಮಾಣಿಕತೆ ಪರಸ್ಪರ ಬೇರ್ಪಡಿಸಲಾಗದ ಮೌಲ್ಯಗಳಾಗಿವೆ ಎಂದರು.
ಲೋಕಾಯುಕ್ತ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಹಿಂದೆ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಅವುಗಳ ವಿಲೇವಾರಿಗೆ ನಿರ್ದಿಷ್ಟ ಸಮಯ ಬೇಕಾಗುತ್ತಿತ್ತು. ಪ್ರಸ್ತುತ ಒಂದು ವರ್ಷದಲ್ಲಿ ಸುಮಾರು 30 ಸಾವಿರ ಪ್ರಕರಣಗಳು ಬಂದಿದ್ದು, ಅವುಗಳಲ್ಲಿ ಸುಮಾರು 22 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ದಿನದ 24 ಗಂಟೆಗಳ ಅವಧಿ ಬದಲಾಗಿಲ್ಲ. ಲಭ್ಯವಿರುವ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ಸಮಯಪಾಲನೆ ಎಂದರೆ ಕೇವಲ ಕಾನೂನಿನ ಚೌಕಟ್ಟಿನಲ್ಲಿ ನಿಗದಿಪಡಿಸಿದ ಸಮಯಕ್ಕೆ ಹಾಜರಾಗುವುದಲ್ಲ. ನಮಗೆ ವಹಿಸಿರುವ ಕೆಲಸವನ್ನು ಯಾವ ಸಮಯದಲ್ಲಿ, ಯಾವ ರೀತಿಯಲ್ಲಿ ಮತ್ತು ಎಷ್ಟು ಪರಿಣಾಮಕಾರಿಯಾಗಿ ಪೂರ್ಣಗೊಳಿಸಬೇಕು ಎಂಬ ಉದ್ದೇಶ ಸ್ಪಷ್ಟವಾಗಿರಬೇಕು. ಕೆಲಸದಲ್ಲಿ ವಸ್ತುನಿಷ್ಠತೆ, ಪ್ರಾಮಾಣಿಕತೆ ಮತ್ತು ಬದ್ಧತೆ ಇರಬೇಕು. ಈ ಗುಣಗಳನ್ನು ವ್ಯವಸ್ಥಿತವಾಗಿ ಅಳವಡಿಸಿಕೊಂಡಾಗ ಮಾತ್ರ ಮೌಲ್ಯಾಧಾರಿತ ಆಡಳಿತ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಮೌಲ್ಯಾಧಾರಿತ ಜೀವನ ನಡೆಸಬೇಕು. ಇದು ವೈಯಕ್ತಿಕ ಜೀವನಕ್ಕೆ ಮಾತ್ರವಲ್ಲದೆ ಸಮಾಜ ಮತ್ತು ಆಡಳಿತ ವ್ಯವಸ್ಥೆಯ ಸುಧಾರಣೆಗೂ ಸಹಕಾರಿಯಾಗುತ್ತದೆ. ನಾವು ಬದುಕಿರುವಾಗ ಮಾತ್ರವಲ್ಲದೆ, ನಮ್ಮ ನಂತರವೂ ಜನರು ನಮ್ಮ ಒಳ್ಳೆಯ ಕೆಲಸಗಳನ್ನು ಸ್ಮರಿಸುವಂತಹ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ ಲಕ್ಷಿ÷್ಮÃಕಾಂತ ರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಯುಕೇಶ್ ಕುಮಾರ್, ಮೈಸೂರು ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಟಿ ಜೆ ಉದೇಶ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.