
ಮೈಸೂರು: ಮೈಸೂರು ರಾಜಮನೆತನದ ಬಗ್ಗೆ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಶುಕ್ರವಾರ ಮೈಸೂರಿನಲ್ಲಿ ಪೋಸ್ಟ್ ಕಾರ್ಡ್ ಅಭಿಯಾನ ನಡೆಯಿತು.
ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪಿಸಿ ಮೈಸೂರು ವಿವಿ ಮೊಹಲ್ಲಾ ಅಂಚೆ ಕಚೇರಿ ಬಳಿ ಸೇವ್ ಹಿಂದೂ ಟೆಂಪಲ್ಸ್ ಟೀಮ್ ವತಿಯಿಂದ ಪೋಸ್ಟ್ ಕಾರ್ಡ್ ಅಭಿಯಾನ ನಡೆಯಿತು. ಮೈಸೂರು ರಾಜಮನೆತನದ ಕೊಡುಗೆಗಳ ಬಗ್ಗೆ ಪೋಸ್ಟ್ ಕಾರ್ಡ್ ಮೂಲಕ ಸಚಿವ ಯತೀಂದ್ರ ಸಿದ್ದರಾಮಯ್ಯಗೆ ತಿಳಿಸಲು ಮುಂದಾದರು.
ಮೈಸೂರು ಮಹಾರಾಜರ ಕುಟುಂಬ ಮತ್ತು ದೇವಸ್ಥಾನಗಳಿಗೆ ಅಪಾರ ಕೊಡುಗೆಗಳನ್ನು ನೀಡಿದೆ. ಈ ಕುರಿತು ಸಚಿವ ಯತೀಂದ್ರ ಅವರಿಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ, ಹಿರಿಯರನ್ನು ಕೇಳಿ ತಿಳಿದುಕೊಳ್ಳಲಿ ಎಂದು ಅಭಿಯಾನದ ಆಯೋಜಕರು ತಿಳಿಸಿದರು. ಈ ಅಭಿಯಾನದಲ್ಲಿ ಸಾರ್ವಜನಿಕರು ಯತೀಂದ್ರ ಅವರ ಬೆಂಗಳೂರಿನ ವಿಧಾನಸೌಧದ ಕಚೇರಿ ವಿಳಾಸಕ್ಕೆ ಪೋಸ್ಟ್ಕಾರ್ಡ್ಗಳನ್ನು ರವಾನಿಸುತ್ತಿದ್ದಾರೆ. ಪೋಸ್ಟ್ಕಾರ್ಡ್ಗಳಲ್ಲಿ ಮೈಸೂರು ಅರಸರು ನಾಡಿಗೆ ನೀಡಿದ ಕೊಡುಗೆಗಳು ಮತ್ತು ಸಾಧನೆಗಳನ್ನು ಪಟ್ಟಿ ಮಾಡಲಾಗಿದೆ. ಯತೀಂದ್ರ ಅವರ ಹೇಳಿಕೆಯು ರಾಜಮನೆತನಕ್ಕೆ ಮಾತ್ರವಲ್ಲದೆ, ಇಡೀ ಮೈಸೂರಿಗರಿಗೂ ನೋವುಂಟು ಮಾಡಿದೆ ಎಂದು ದೂರಲಾಗಿದೆ. ತಮ್ಮ ಹೇಳಿಕೆ ಬಗ್ಗೆ ಯತೀಂದ್ರ ರಾಜಮನೆತನದವರಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.