
ಪಿರಿಯಾಪಟ್ಟಣ: ಶಾಲೆಗಳಲ್ಲಿ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಲ್ಲಿನ ಪ್ರತಿಭೆಗಳನ್ನು ಗರುತಿಸುವ, ಸಂಶೋಧಿಸುವ, ಅರಳಿಸುವ, ಪುರಸ್ಕರಿಸುವ, ಉತ್ತೇಜಿಸುವ ಶಕ್ತಿಯನ್ನು ಶಿಕ್ಷಕ ನಿಂಗರಾಜು ಹೊಂದಿದ್ದರು ಎಂದು ನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಪಿರಿಯಾಪಟ್ಟಣ ತಾಲ್ಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಪಿ ಪ್ರಶಾಂತ್ ಗೌಡ ತಿಳಿಸಿದರು.
ತಾಲ್ಲೂಕಿನ ಬೆಟ್ಟದಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿಜ್ಞಾನ ಶಿಕ್ಷಕರಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಚಿಕ್ಕ ಹನಸೋಗೆ ನಿಂಗರಾಜು ರವರನ್ನು ಸನ್ಮಾನಿಸಿ ಮಾತನಾಡಿದ ಅವರು
ಹುಟ್ಟು ಮತ್ತು ಸಾವು ಜೀವನದ ಅವಿಭಾಜ್ಯ ಅಂಗ. ಹುಟ್ಟಿದ ಪ್ರತಿಯೊಬ್ಬರು ಸಾಯಲೇ ಬೇಕು, ಆದರೆ ಹುಟ್ಟು ಮತ್ತು ಸಾವಿನ ನಡುವೆ ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕುವುದು ತುಂಬ ಕಷ್ಟ, ಅಂತಹ ಕಷ್ಟದ ಹಾದಿಯಲ್ಲಿ ಬದುಕಿ ಹಿರಿಯರು ಮತ್ತು ಕಿರಿಯರು ಸೇರಿದಂತೆ ಎಲ್ಲರಿಂದಲೂ ಸಂಸ್ಕಾರಯುತ ವ್ಯಕ್ತಿ ಎಂದು ಬದುಕಿದವರಲ್ಲಿ ಚಿಕ್ಕ ಹನಸೋಗೆ ನಿಂಗರಾಜು ರವರ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ. ಯಾವುದೇ ನೌಕರರಿಗೆ ತಮ್ಮ ಸೇವಾ ಅವಧಿಯಲ್ಲಿ ಮಾಡುವ ಕೆಲಸಗಳು ಅವರಿಗೆ ಗೌರವವನ್ನು ಹೆಚ್ಚಿಸುವಂತಿರಬೇಕು. ಅಂತಹ ಗೌರವ ಸಂಪಾದನೆಯಲ್ಲಿ ನಿಂಗರಾಜು ಹೆಮ್ಮೆ ಪಡುವಂತಿದ್ದಾರೆ ಅವರು ಬಡತನದಲ್ಲಿ ಹುಟ್ಟಿ ಕೃಷಿಕರಾಗಿ, ನಂತರ ನೌಕರರಾಗಿ ಸಮಾಜಸೇವಕರಾಗಿ ಗುರುತಿಸಿಕೊಂಡು ಸಮಾಜದಲ್ಲಿನ ಅನೇಕ ಅಸಹಾಯಕರಿಗೆ, ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮತ್ತು ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ, ಇವರ ಶಿಷ್ಯಕೋಟಿ ಸಾಗರದಷ್ಟಿದ್ದು ಇಷ್ಟು ದೊಡ್ಡ ಅನುಭವವುಳ್ಳವರು ನಿವೃತ್ತಿಯಾಗಿರುವುದು ವೃತ್ತಿಗೆ ಒರತು ಪ್ರವೃತ್ತಿಗಲ್ಲ ಎಂದು ಭಾವಿಸಿ ಸಮಾಜಸೇವೆಯಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ನೊಂದವರಿಗೆ ಆಶ್ರಯವಾಗಬೇಕು ಎಂದರು.
ನಿವೃತ್ತಿಹೊಂದಿದ ಶಿಕ್ಷಕ ನಿಂಗರಾಜು ಮಾತನಾಡಿ ನಾನು ಬಡತನದಲ್ಲಿ ಬೆಳೆದ ರೈತನ ಮಗ ನನ್ನ ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳಿಂದ ಗಳಿಸಿರುವ ಪ್ರೀತಿ ನನ್ನಲ್ಲಿ ಹಜರಾಮರವಾಗಿರುತ್ತದೆ. ಬೀಳ್ಕೊಡುಗೆ ಎಂಬುದು ಒಂದು ವೃತ್ತಿಯಿಂದ ಸಿಗುವ ತಾತ್ಕಾಲಿಕ ಬಿಡುಗಡೆ ಅಷ್ಟೇ, ನನ್ನ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಸಹಪಾಠಿಗಳಿಂದ ಹಲವು ವಿಚಾರಗಳನ್ನು ಕಲಿತು ಅದನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಅದನ್ನು ಎಂದಿಗೂ ಮರೆಯುವುದಿಲ್ಲ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ನಾರಾಯಣ್ ಗೌಡ, ಸಂಘದ ಕಾನೂನು ಸಲಹೆಗಾರ ಕೆ ಡಿ ಸಂದೀಪ್, ಕಾರ್ಯದರ್ಶಿ ಮೋಹನ್ ಕಿರಂಗೂರು, ಖಜಾಂಚಿ ಮನುಗೌಡ ಬೆಳ್ತೂರು ಉಪಸ್ಥಿತರಿದ್ದರು.