
ಮೈಸೂರು; ಮುಂದಿನ 15 ದಿನಗಳ ಕಾಲ ಪ್ರತಿನಿತ್ಯ ತಮಿಳುನಾಡಿಗೆ 4 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಡೆಯನ್ನು ಖಂಡಿಸಿ ಶುಕ್ರವಾರ ನಗರದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಕೈಯಲ್ಲಿ ಬೆಣ್ಣೆ ಹಾಗೂ ಸುಣ್ಣವನ್ನು ಹಿಡಿದು ಪ್ರತಿಭಟನೆ ನಡೆಸಲಾಯಿತು.
ನಗರದ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ನಮಗೆ ಸುಣ್ಣ ಹಾಗೂ ತಮಿಳುನಾಡಿಗೆ ಬೆಣ್ಣೆಯನ್ನು ಕೊಡುತ್ತಿದೆ ಎಂದು ಅಣುಕು ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪದೇ ಪದೇ ಕಾವೇರಿ ನೀರಿನ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ವಾಸ್ತವವಾಗಿ ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಏಕೆ ಅನ್ಯಾಯವಾಗುತ್ತಿದೆ ಎಂಬುದನ್ನು ತಿಳಿಸಲು ರಾಜ್ಯ ಸರ್ಕಾರ ಈ ಕೂಡಲೇ ಕಾವೇರಿ ನೀರಿನ ತಜ್ಞರ ಒಂದು ಸತ್ಯಶೋಧನಾ ಸಮಿತಿಯನ್ನು ರಚಿಸಬೇಕು. ಹಾಗೂ ಕೇಂದ್ರ ಸರ್ಕಾರ ಕನ್ನಡಿಗರಿಗೆ ಮರಣಶಾಸನವಾಗಿರುವ ಈ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಜಲಾಶಯಗಳಲ್ಲಿ ನೀರಿಲ್ಲದಿದ್ದರೂ, ಪ್ರತಿ ಬಾರಿಯೂ ಕಾವೇರಿ ಪ್ರಾಧಿಕಾರ ತಮಿಳುನಾಡು ಪರವಾಗಿಯೇ ಆದೇಶವನ್ನು ನೀಡುತ್ತಾ ಬಂದಿದೆ. ಇದು ಅತ್ಯಂತ ದುರಂತದ ವಿಷಯ. ನಮಗೆ ಕುಡಿಯಲೇ ನೀರಿಲ್ಲದಿದ್ದರೂ, ಅದರಲ್ಲೂ ನಮ್ಮ ಮೈಸೂರಿನಲ್ಲಿಯೇ ಕೆಲವು ಪ್ರದೇಶಗಳಿಗೆ ವಾರಕ್ಕೊಮ್ಮೆ, ಎರಡು ಬಾರಿ ನೀರನ್ನು ಬಿಡಲಾಗುತ್ತಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಸಹ ಕಾವೇರಿ ಪ್ರಾಧಿಕಾರ ನಮ್ಮ ಕಾವೇರಿ ಕೊಳ್ಳಗಳ ನೀರಿನ ವಾಸ್ತು ಸ್ಥಿತಿಯನ್ನು ಅರಿಯದೆ, ತಮಿಳುನಾಡಿಗೆ ಬೆಳೆ ಬೆಳೆಯಲು ನೀರನ್ನು ಬಿಡಲು ಹೇಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ನಮ್ಮ ರಾಜ್ಯದಲ್ಲಿ ಈ ವರ್ಷ ಮಳೆ ಕೊರತೆಯಾಗಿ, ಹಲವಾರು ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಜೊತೆಗೆ ಕಾವೇರಿ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಕಾವೇರಿ ನೀರು ಬಿಡುವ ವಿಚಾರವಾಗಿ ಮೇಲ್ಮನವಿ ಸಲ್ಲಿಸಿ, ರಾಜ್ಯದ ಜಲಾಶಯಗಳ ವಸ್ತು ಸ್ಥಿತಿಯನ್ನು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಸಿ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದೆಂದು ಹಾಗೂ ಇದಕ್ಕೆ ಒಂದು ಶಾಶ್ವತ ಪರಿಹಾರ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ಗೌಡ, ಮುಖಂಡರುಗಳಾದ ಪ್ರಭುಶಂಕರ್ ಎಂ ಬಿ , ಸಿಂದುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ , ಶಿವಲಿಂಗಯ್ಯ, ಮಧುವನ ಚಂದ್ರು, ಹೊನ್ನೇಗೌಡ, ಶೋಭಾ ರಾಣಿಗೌಡ, ಶಿಲ್ಪ, ಸುಜಾತ, ನಾಗರಾಜು, ದರ್ಶನ್ ಗೌಡ, ರಾಧಾಕೃಷ್ಣ, ರಂಗಪ್ಪ, ಗಣೇಶ್ ಪ್ರಸಾದ್, ಪ್ರದೀಪ್ ಆರ್, ಆನಂದ್, ತ್ಯಾಗರಾಜ್, ನಾಗೇಂದ್ರ, ನಾಗೇಶ್, ರವೀಶ್ , ರಾಮಕೃಷ್ಣೇಗೌಡ, ವಿಷ್ಣು ಇನ್ನೂ ಇತರರು ಭಾಗವಹಿಸಿದ್ದರು.