
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮೂರನೇ ದಿನವಾದ ಮಂಗಳವಾರ ಕಳೆಗಟ್ಟಿದ್ದು, ಇಂದು ಮಹಿಳಾ ದಸರಾಗೆ ಚಾಲನೆ ನೀಡಲಾಯಿತು. ನಗರದ ಜೆ.ಕೆ.ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಸರಾಗೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರೇ ಈ ಸಮಾಜದ ಶಕ್ತಿ ಹಾಗೂ ಕುಟುಂಬದ ಆಧಾರ ಸ್ತಂಭ ಹಾಗಾಗಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶ ಸಿಗಬೇಕು ಎಂದು ಹೇಳಿದರು.
ಮಹಿಳೆಯರಿಗೆ ಹಿಂದಿನ ಕಾಲದಿಂದಲೂ ಸಮಾನವಾದ ಅವಕಾಶಗಳು ಸಿಕ್ಕಿಲ್ಲ, ಸರಿಯಾದ ಅವಕಾಶ ಸಿಕ್ಕರೆ ಮಹಿಳೆಯರ ಶಕ್ತಿ ಏನೆಂದು ಎಲ್ಲರಿಗೂ ತಿಳಿಯಲಿದೆ ಎಂದರು.
ಬುದ್ದ, ಬಸವಣ್ಣ, ಅಂಬೇಡ್ಕರ್ ಅವರಂಥ ಮಹಾನ್ ನಾಯಕರು ಮಹಿಳೆಯರ ಸಮಾನತೆಗಾಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ, ಸಂವಿಧಾನದ ಮೂಲಕ ಇಂದು ಮಹಿಳೆಯರಿಗೆ ಉನ್ನತ ಸ್ಥಾನಗಳು ಸಹಾ ದೊರೆಯುತ್ತಿವೆ ಆದರೂ ಸಹಾ ಹಲವು ಕಡೆಗಳಲ್ಲಿ ಮಹಿಳೆಯರಿಗೆ ಪುರುಷರಷ್ಟು ಸ್ವತಂತ್ರವಿಲ್ಲ ಇದು ದುರದುಷ್ಟಕರ. ಇನ್ನಾದರೂ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶ ಸಿಗಲಿ, ಈ ದಸರಾ ಮಹೋತ್ಸವದಲ್ಲಿ ಅಕ್ಟೋಬರ್ 16 ರವರೆಗೆ ನಡೆಯಲಿರುವ ಈ ಮಹಿಳಾ ದಸರಾದಲ್ಲಿ ಎಲ್ಲಾ ಮಹಿಳೆಯರು ಭಾಗವಹಿಸಿ ಎಲ್ಲರೂ ದಸರಾ ಸಂಭ್ರಮಿಸಿ ಎಂದು ಶುಭ ಕೋರಿದರು.
ರೇಷ್ಮೆ ಹಾಗೂ ಪಶು ಸಂಗೋಪನಾ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ದಸರಾ ಮಹೋತ್ಸವ ಎಂದರೆ ಚಾಮುಂಡೇಶ್ವರಿ ತಾಯಿಯ ಹಬ್ಬ ಹಾಗಾಗಿ ಮಹಿಳೆಯರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಿಳೆಯರು ಯಾವುದಕ್ಕೂ ಹಿಂಜರಿಯಬಾರದು. ಇದು ನಿಮ್ಮ ಕಾರ್ಯಕ್ರಮ ಎಂದು ಮಹಿಳೆಯರಿಗೆ ಶುಭಕೋರಿದರು.ಈ ವೇಳೆ ಶಾಸಕ ಹರೀಶ್ ಗೌಡ, ಮಹಿಳಾಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯಾ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರು. ಉದ್ಘಾಟನೆಯ ನಂತರ ಮಹಿಳೆಯರಿಗಾಗಿ ಹಲವು ಮನರಂಜನಾ ಕಾರ್ಯಕ್ರಮಗಳು ನಡೆದವು. ಹಾಡಿದರು. ಕುಣಿದು ನಲಿದ ಮಹಿಳೆಯರು ಹಲವು ಸ್ಪರ್ಧೆಗಳಲ್ಲಿ ಬಹುಮಾನಕ್ಕಾಗಿ ಸೆಣಸಾಟ ನಡೆಸಿದರು. ಇದಲ್ಲದೆ ಮಹಿಳೆಯರು, ಮಹಿಳಾ ಸಂಘಗಳು ತಯಾರಿಸಿರುವ ವಸ್ತುಗಳು, ಉತ್ಪನ್ನಗಳು, ಆಹಾರ ಪದಾರ್ಥಗಳು ಮುಂತಾದವುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ.