
ಮೈಸೂರು: ನಗರದಲ್ಲಿರುವ ವಿಶ್ವ ಪ್ರಸಿದ್ಧ ಅಂಬಾ ವಿಲಾಸ ಅರಮನೆಯಲ್ಲಿ ವಿಶ್ವಕಳೆದ 11 ದಿನಗಳಿಂದ ಮೈಸೂರಿನ ರಾಜವಂಶಸ್ಥರು ನಡೆಸುತ್ತಿದ್ದ ನವರಾತ್ರಿ ಧಾರ್ಮಿಕ ಕಾರ್ಯಗಳು ಬುಧವಾರ ಮುಕ್ತಾಯಗೊಂಡವು. ಅರಮನೆಯಲ್ಲಿ ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಗಳು ಆರಂಭವಾದವು. ಬೆಳಗ್ಗೆ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮನದ ನಂತರ ಬೆಳಗ್ಗೆ 10 ಗಂಟೆಗೆ ಸವಾರಿ ತೊಟ್ಟಿಗೆ ಮಹಾರಾಜ ಯದುವೀರ್ ಆಗಮಿಸಿದರು. ಉತ್ತರ ಪೂಜೆಯನ್ನು ನಡೆಸಿದರು. ಬಳಿಕ ಪಟ್ಟದ ಕತ್ತಿಯೊಂದಿಗೆ ವಿಜಯಯಾತ್ರೆ ಕೈಗೊಂಡು, ಅರಮನೆಯ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾದ ಬಳಿಯಿರುವ ಬನ್ನಿ ಮರದ ಬಳಿ ಬೆಳಗ್ಗೆ 10.30ಕ್ಕೆ ಬಂದರು. ಬಳಿಕ ಸಾಂಪ್ರದಾಯಿಕ ಶಮಿ ಪೂಜೆಯನ್ನು ವೇದ ಮಂತ್ರಗಳ ಘೋಷಣೆಯ ಹಿನ್ನಲೆಯಲ್ಲಿ ಬನ್ನಿ ಮರಕ್ಕೆ ಸಲ್ಲಿಸಿ, ನಮಿಸಿದರು. ನಂತರ ಎಲ್ಲರಿಗೂ ಪ್ರಸಾದ ವಿತರಿಸಿದರು. ಶಮಿ ಮರಕ್ಕೆ ಪೂಜೆ ಸಲ್ಲಿಸಿದ ಬಳಿಕ ಬೆಳಗ್ಗೆ 11.20ಕ್ಕೆ ವಾಪಾಸ್ ಅರಮನೆಗೆ ಬಂದು ದೇವರ ಕೋಣೆಯಲ್ಲಿ ಕೈಗೆ ಕೈಟ್ಟಿದ್ದ ಕಂಕಣವನ್ನು ವಿಸರ್ಜಿಸಿದರು. ಆ ಮೂಲಕ ನವರಾತ್ರಿಯ ಎಲ್ಲಾ ಪೂಜಾ ಕೈಂಕಾರ್ಯಗಳಿಗೆ ತೆರೆ ಎಳೆದರು. ಆ ಮೂಲಕ ಕಳೆದ 9 ದಿನಗಳಿಂದ ಆಚರಿಸಿಕೊಂಡು ಬಂದಿದ್ದ ವ್ರತವನ್ನು ಮುಕ್ತಾಯಗೊಳಿಸಿದರು. ನಂತರ ಧರಿಸಿದ್ದ ರಾಜ ಪೋಷಕನ್ನು ತೆಗೆದು, ಸಾಮಾನ್ಯ ಬಟ್ಟೆಯನ್ನು ಧರಿಸಿದರು.