Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಯಾರಾಗ್ತಾರೆ ಹೆಚ್ ಡಿ ಕೋಟೆ, ಸರಗೂರು  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು?

ಅಭಿಪ್ರಾಯ ಸಂಗ್ರಹಿಸಿದ ಕೆಪಿಸಿಸಿ ವೀಕ್ಷಕರ ತಂಡ – ನ.2ರಂದು ಹೆಸರು ಪ್ರಕಟ 

ಎಚ್ ಡಿ ಕೋಟೆ : ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಪಕ್ಷದ ಕಾರ್ಯಕರ್ತರ ಸಂಘಟನಾ ಸಾಮರ್ಥ್ಯ, ಪಕ್ಷನಿಷ್ಠೆ ಹಾಗೂ ಜನಸಂಪರ್ಕವನ್ನು ಪರಿಗಣಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಕೆಪಿಸಿಸಿ ವೀಕ್ಷಕ, ಮಾಜಿ ಸಂಸದ ಮುದ್ದಹನುಮೇಗೌಡ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಂಘಟನ್ ಸೃಜನ್ ಅಭಿಯಾನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತನೇ ಸಾರ್ವಭೌಮ. ಹೀಗಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರದಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮೊದಲ ಆದ್ಯತೆ ನೀಡಲಾಗುವುದು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗುವವರಿಗೆ ನಾಯಕತ್ವ ಗುಣ ಇರಬೇಕು.  ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಸಾಮರ್ಥ್ಯ ಇರಬೇಕು.  ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದು, ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸುವುದು ಹಾಗೂ ಪಕ್ಷದ ತತ್ವ, ಸಿದ್ಧಾಂತಗಳನ್ನು ಜನರಿಗೆ ತಲುಪಿಸುವುದು ಅಧ್ಯಕ್ಷರಾಗುವವರ ಮೊದಲ ಗುರಿಯಾಗಬೇಕು ಎಂದು ಹೇಳಿದರು. 

ಸಂಘಟನ್ ಸೃಜನ್ ಅಭಿಯಾನ ಅನ್ನೋದು ರಾಹುಲ್ ಗಾಂಧಿಯವರ ಪರಿಕಲ್ಪನೆಯಾಗಿದೆ. ತಳಮಟ್ಟದಿಂದ  ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಇವತ್ತು ಒಂದು ಸಾವಿರಕ್ಕೂ ಹೆಚ್ಚು ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದೆ. ವೀಕ್ಷಕರು ಕೊಡುವ ವರದಿ ಬಗ್ಗೆ ಮಲ್ಲಿಕಾರ್ಜನ ಖರ್ಗೆ, ಕೆ.ಸಿ. ವೇಣುಗೋಪಾಲ್, ಸುರ್ಜೆವಾಲಾ ಹಾಗು ರಾಹುಲ್ ಗಾಂಧಿಯವರು ಕುಳಿತುಕೊಂಡು ಚರ್ಚೆ ಮಾಡಿ ಅಧ್ಯಕ್ಷರ ನೇಮಕ ಮಾಡಿದ್ದಾರೆ. ಅದೇ ರೀತಿ ಹೆಚ್ ಡಿ ಕೋಟೆ ಕ್ಷೇತ್ರದಲ್ಲೂ ನಡೆಯಬೇಕು ಎಂಬುದು ನನ್ನ ಆಸೆಯಾಗಿದೆ. ಸ್ಥಳೀಯ ಮುಖಂಡರಾಗಿರುವ ಹೆಚ್ ಸಿ ನರಸಿಂಹಮೂರ್ತಿ ಅವರು ಹೇಳಿದಂತೆ ಬ್ಲಾಕ್ ಅಧ್ಯಕ್ಷರ ನೇಮಕಕ್ಕೆ ಹೆಸರು ಶಿಫಾರಸ್ಸು ಮಾಡುವುದು ಸ್ಥಳೀಯ ಶಾಸಕರೇ ಇರಬಹುದು.  ಆದರೆ ಶಾಸಕರ ಶಿಫಾರಸ್ಸಿನ  ಜೊತೆಗೆ ಕಾರ್ಯಕರ್ತರ ಅಭಿಪ್ರಾಯವೂ ಮುಖ್ಯವಾಗುತ್ತೆ. ಪಕ್ಷ ಸಂಘಟನೆ ದುರ್ಬಲವಾದರೆ  ಎಲ್ಲಾ  ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತೆ. ಈ ನಿಟ್ಟಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯಲ್ಲಿ ಪಕ್ಷದ ಹಿರಿಯ ಮುಖಂಡರು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳಿಗೂ ಮಹತ್ವ ನೀಡಲಾಗುವುದು. ಪಕ್ಷದ ಸಂಘಟನೆಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಿ ಮುಂಬರುವ ರಾಜಕೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸೂಕ್ತ ವ್ಯಕ್ತಿಗೆ ಜವಾಬ್ದಾರಿ ವಹಿಸಲಾಗುವುದು ಎಂದು ಹೇಳಿದರು.

ಕಪಿಸಿಸಿ ಪ್ರಧಾನ ಕಾರ್ಯದರ್ಶಿ ತ್ಯಾಗರಾಜು ಮಾತನಾಡಿ, ನಾನು ಒಬ್ಬ ಮಾಜಿ ಶಾಸಕರ ಮಗನೇ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ತಾಳ್ಮೆ ಇದ್ದರೆ ಒಂದಲ್ಲ ಒಂದು ದಿನ ಜವಾಬ್ದಾರಿ ಸಿಗುತ್ತೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲರು ಪಕ್ಷಕ್ಕಾಗಿ ದುಡಿಯಬೇಕು ಎಂದು ಕರೆ ನೀಡಿದರು. 

(ಕೋಟ್ )

ಬೇಸರ ವ್ಯಕ್ತಪಡಿಸಿದ ಹೆಚ್ ಸಿ ನರಸಿಂಹಮೂರ್ತಿ : 

ಮೈಸೂರು ಜಿಲ್ಲೆಯಲ್ಲೇ ಎಸ್ಸಿ-ಎಸ್ಟಿ ಸಮುದಾಯದಲ್ಲಿ ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ. ಆದರೆ ಇಲ್ಲಿಯವರೆಗೆ ಯಾವ ನಿಗಮ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರ ಹುದ್ದೆ ಕೊಟ್ಟಿದ್ದೀರಿ ಎಂದು ಕಾಂಗ್ರೆಸ್ ಮುಖಂಡ ಹೆಚ್ ಸಿ ನರಸಿಂಹಮೂರ್ತಿ ಪ್ರಶ್ನೆ ಮಾಡಿದರು. ಅಲ್ಲದೆ ಕೆಪಿಸಿಸಿ ವೀಕ್ಷಕರ ತಂಡ ಏನೇ ಅಭಿಪ್ರಾಯ ಸಂಗ್ರಹಿಸಿ ಹೋದರೂ ಶಾಸಕ ಅನಿಲ್ ಚಿಕ್ಕಮಾದು ಅವರ ನಿರ್ಧಾರವೇ ಅಂತಿಮವಾಗಲಿದೆ ಎಂದು ಹೇಳಿದರು. 

(ಕೋಟ್ )

ನ.2 ರಂದು ಹೆಸರು ಪ್ರಕಟ:

ಕಾರ್ಯಕರ್ತರು, ಮುಖಂಡರಿಂದ ಕೆಪಿಸಿಸಿ  ವೀಕ್ಷಕರ ತಂಡ ಅಭಿಪ್ರಾಯ ಸಂಗ್ರಹಿಸಿದ್ದು, ನವೆಂಬರ್ ಎರಡರಂದು ಬ್ಲಾಕ್ ಅಧ್ಯಕ್ಷರ ಹೆಸರು ಹಾಗೂ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟಮಾಡಲಿದೆ. 

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಸಿ ಬಸವರಾಜು, ತ್ಯಾಗರಾಜು, ಬೀರಿಹುಂಡಿ ಬಸವಣ್ಣ, ಏಜಾಜ್ ಪಾಷಾ, ಮಾದಪ್ಪ, ಹೆಚ್ ಸಿ ನರಸಿಂಹಮೂರ್ತಿ, ಹಿರೇಹಳ್ಳಿ ಸೋಮೇಶ್, ಪರಶಿವಮೂರ್ತಿ, ಬಿವಿ ಬಸವರಾಜು, ಈರೇಗೌಡ,   ಸಿದ್ದರಾಜು, ಕೆಂಡಗಣಸ್ವಾಮಿ, ಮಹೇಶ್, ಬಸಪ್ಪ, ಭಾಗ್ಯಲಕ್ಷ್ಮಿ, ಮರಿದೇವಯ್ಯ, ಪ್ರಕಾಶ್ , ಕಂದೇಗಾಲ ಶಿವರಾಜು, ಅಜರುದ್ದೀನ್, ಸೌಮ್ಯ ಮಂಜುನಾಥ್, ವಕ್ತಾರ ಅಶೋಕ್, ಪಿಎಲ್ ಸ್ವಾಮಿ,  ಚಂದನ್ , ಜಿನ್ನಹಳ್ಳಿ ರಾಜನಾಯಕ, ಶ್ರೀನಿವಾಸ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.