Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನರು ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿರಬೇಕು; ಡಾ. ಸಿ.ಜಿ. ಬೆಟಸೂರಮಠ


ಮೈಸೂರು; ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನರು ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿರಬೇಕು ಎಂದು ಮೈಸೂರಿನ ಜೆಎಸ್‌ಎಸ್ ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ ಹೇಳಿದರು.
ನಗರ ಕೇಂದ್ರ ಗ್ರಂಥಾಲಯ ಮೈಸೂರು ಹಾಗೂ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಶುಕ್ರವಾರ ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಸಂಬAಧಿಸಿದ ಎರಡನೇ ಪತ್ರಿಕೆಯ ಅಣಕು ಪರೀಕ್ಷೆಗೆ ಚಾಲನೆ ನೀಡಿ ಮಾತನಾಡಿದ ಅವರಯ, ಪ್ರಸ್ತುತ ಕಾಲಘಟ್ಟವನ್ನು ವಿಶ್ಲೇಷಿಸಿದರು.
ಇದು ಕಲಹದ ಯುಗವೋ, ಕಲಿಯುವ ಯುಗವೋ ಅಥವಾ ನಕಲಿ ಯುಗವೋ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಇಂದಿನದು ಆಯ್ಕೆಯ ಯುಗವಾಗಿದ್ದು, ಸರಿಯಾದ ಆಯ್ಕೆ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಬದಲಾವಣೆಗಳು ಸಂಭವಿಸುತ್ತಿದ್ದು, ಎಲ್ಲೆಡೆ ಸ್ಪರ್ಧೆ ಹೆಚ್ಚಾಗಿದೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನರು ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿರಬೇಕು ಎಂದರು.
ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗದ ಆಶಯವನ್ನು ಉಲ್ಲೇಖಿಸಿ, ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಬದಲಾಗುತ್ತಿರುವ ಜಗತ್ತಿನಲ್ಲಿ ಹೊಸ ಜ್ಞಾನವನ್ನು ನಿರಂತರವಾಗಿ ಪಡೆದುಕೊಳ್ಳುವುದು, ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದು, ಹೊಸ ಅವಕಾಶಗಳನ್ನು ಬಳಸಿಕೊಳ್ಳುವುದು ಮತ್ತು ಸೋಲುಗಳಿಂದ ಮತ್ತೆ ಎದ್ದು ನಿಲ್ಲುವ ಮನೋಭಾವ ಬೆಳೆಸಿಕೊಳ್ಳುವುದೇ ಯಶಸ್ವಿ ಜೀವನದ ಆಧಾರವಾಗಿದೆ ಎಂದು ಹೇಳಿದರು.
“ಜ್ಞಾನವು ಉತ್ಪಾದನೆಯ ಏಕೈಕ ಸಾಧನವಾಗಿದೆ. ಅದರ ಮೌಲ್ಯವು ಎಂದಿಗೂ ಕಡಿಮೆಯಾಗುವುದಿಲ್ಲ.” ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಉನ್ನತ ಗುರಿ, ಆತ್ಮವಿಶ್ವಾಸ ಹಾಗೂ ನಿರಂತರ ಪ್ರಯತ್ನ ಅತ್ಯಗತ್ಯ. ಯಾವುದೇ ಅಡೆತಡೆಗಳಿಗೆ ಎದೆಗುಂದದೆ ಸತತ ಪರಿಶ್ರಮದಿಂದ ಮುನ್ನಡೆಯಬೇಕು ಎಂದು ಸ್ಪರ್ಧಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್ ಬಿ. ಮಾತನಾಡಿ, ಇಂದು ಸಾರ್ವಜನಿಕರು, ಓದುಗರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು ಉತ್ತಮ ಕಟ್ಟಡದಲ್ಲಿ ಕುಳಿತು ನೆಮ್ಮದಿಯಿಂದ ಓದುತ್ತಿರುವುದರ ಹಿಂದೆ ಹಲವಾರು ಅಧಿಕಾರಿಗಳ ಪರಿಶ್ರಮ ಮತ್ತು ಕೊಡುಗೆ ಇದೆ ಎಂದು ತಿಳಿಸಿದರು. ಓದುಗರಿಗೆ ಉತ್ತಮ ಹಾಗೂ ಹಸಿರು ಪರಿಸರದಲ್ಲಿ ಅಧ್ಯಯನ ಮಾಡಲು ಅನುಕೂಲ ಕಲ್ಪಿಸುವಲ್ಲಿ ಅನೇಕರು ಶ್ರಮಿಸಿದ್ದಾರೆ. ಇಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪೀಪಲ್ಸ್ ಪಾರ್ಕ್ ನಗರ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕಿ ಸೌಮ್ಯ ಎಸ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.