
ಎಚ್ ಡಿ ಕೋಟೆ : ಶ್ರೀ ಮಂಜುನಾಥ ಕಾರು, ಟೆಂಪೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ 71 ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಧ್ಯಕ್ಷ ಶ್ರೀನಿವಾಸ್ ಬೂದನೂರು ನೇತೃತ್ವದಲ್ಲಿ ಕನ್ನಡಾಂಬೆಗೆ ನಮಿಸಿ, ಕನ್ನಡ ಧ್ವಜಾರೋಹಣ ಮಾಡಲಾಯಿತು. ಕನ್ನಡಪರ ಜೈಘೋಷ ಮೊಳಗಿಸುತ್ತಾ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಶ್ರೀ ಮಂಜುನಾಥ ಕಾರು, ಟೆಂಪೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ಬೂದನೂರು ಮಾತನಾಡಿ, ಕನ್ನಡ ರಾಜ್ಯೋತ್ಸವ ನಮ್ಮ ಇತಿಹಾಸವನ್ನು ನೆನಪಿಸುವ ದಿನ ಮಾತ್ರವಲ್ಲ, ಅದು ನಮ್ಮ ಜವಾಬ್ದಾರಿಯನ್ನು ನೆನಪಿಸುವ ದಿನವೂ ಆಗಿದೆ. ನಮ್ಮ ತಾಲೂಕಿನ ಜನ ಗಡಿಭಾಗದಲ್ಲಿರುವುದರಿಂದ ಕನ್ನಡ ಉಳಿಸಿ, ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಕನ್ನಡ ಕೇವಲ ಭಾಷೆಯಲ್ಲಿ ಅದು ನಮ್ಮ ಅಸ್ತಿತ್ವ, ನಮ್ಮ ಆತ್ಮವಾಗಿದೆ. ಬಾಡಿಗೆಗೆ ಹೋದ ಸಂದರ್ಭದಲ್ಲಿ ಹೊರರಾಜ್ಯದಿಂದ ಬರುವ ಪ್ರಯಾಣಿಕರಿಗೆ ಕನ್ನಡ ಭಾಷೆ ಮಹತ್ವ ತಿಳಿಸಿಕೊಡಬೇಕಾಗಿದೆ. ನಮ್ಮ ರಾಜ್ಯವನ್ನು ಇನ್ನಷ್ಟು ಸುಂದರ, ಸಶಕ್ತ ಮತ್ತು ಸಮಾನತೆಯ ರಾಜ್ಯವನ್ನಾಗಿಹಿಸಲು ನಾವೆಲ್ಲರೂ ಕನ್ನಡ ನಾಡು, ನುಡಿ, ಭಾಷೆ ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ. ನಮ್ಮ ರಾಜ್ಯದ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಕನ್ನಡಿಗರಾದ ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಂಕಣಬದ್ಧರಾಗೋಣ ಎಂದು ಹೇಳಿದರು.
ಈ ವೇಳೆ ಶ್ರೀ ಮಂಜುನಾಥ ಕಾರು, ಟೆಂಪೋ ಚಾಲಕರು ಹಾಗೂ ಮಾಲೀಕರ ಸಂಘದ ಮಾಜಿ ಅಧ್ಯಕ್ಷರಾದ ಮೊತ್ತ ಮಂಜು, ಮಲ್ಲು, ಕಾರ್ಯದರ್ಶಿ ಟಿ.ಎಸ್. ಕೃಷ್ಣ, ಶಮಿ, ಅಬ್ಜಲ್ , ಕ್ಯಾತನಾಯಕ, ಬೈರನಾಯಕ, ಮುಕ್ಬುಲ್. ಮಧು, ಗೋವಿಂದ, ಮಂಜು, ಕುಮಾರ ,ಗುಲ್ಲು ಸೇರಿದಂತೆ ಸದ್ಯಸರು ಉಪಸ್ಥಿತರಿದ್ದರು.