3Kaala News

ಸುಭಾಷಿತ 

ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅವಶ್ಯಕ. ಮನುಷ್ಯ ಧರ್ಮದಿಂದ ವಿಮುಖನಾದರೇ, ಜೀವನ ಅಶಾಂತಿಯ ಕಡಲಾಗುತ್ತದೆ. ಮನುಷ್ಯನ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೆ, ಮಾರಕವಾಗಬಾರದು.  ಸುಳ್ಳು ಹೇಳಲು ಹಲವು ದಾರಿ, ಆದರೆ ಸತ್ಯಕ್ಕೆ ಇರುವುದೊಂದೇ ದಾರಿ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹಣ ಉಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮಾಡುತ್ತಿದೆ; ಮಾಜಿ ಸಚಿವ ಡಾ. ಅಶ್ವಥ್ ನಾರಾಯಣ


ಮೈಸೂರು: ರಾಜ್ಯ ಸರ್ಕಾರದ ಖಜಾನೆ ದಿವಾಳಿಯಾಗಿದೆ. ಹೀಗಾಗಿ ಹಣ ಉಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮಾಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಟೀಕಿಸಿದರು.
ಸೋಮವಾರ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ 8 ಲಕ್ಷ ಕೋಟಿರೂಗಳ ಸಾಲ ಮಾಡಿದೆ. ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿದೆ. ಗ್ಯಾರಂಟಿ ಯೋಜನೆಗಳಿಗೆಂದು ಹಣವನ್ನೆಲ್ಲಾ ಖರ್ಚು ಮಾಡಿದೆ. ಸರ್ಕಾರದ ಖಜಾನೆ ಬರ್ಬದ್ ಆಗಿದೆ. ಖಜಾನೆಯಲ್ಲಿ ಹಣವಿಲ್ಲದ ಕಾರಣ ಆಡಳಿತ ನಡೆಸಲು ಸಾಧ್ಯವಾಗದ ಕಾರಣ ಹಣ ಉಳಿಸಲೆಂದು ಭಾಗ್ಯಲಕ್ಷಿ ಗ್ಯಾರಂಟಿ ಯೋಜನೆಯನ್ನು ಪರಿಷ್ಕರಣೆ ಮಾಡುತ್ತಿದೆ. ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದ್ದಾರೆ. ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿರುವುದೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಕ್ಕೆ ಬಂದು ಹಲವು ದಿನ ಕಳೆದಿದ್ದರೂ ಖಾತೆ ಖ್ಯಾತೆ ಮುಂದುವರೆದಿದೆ. ಶಿವಕುಮಾರ್ ಅವರ ನೇತೃತ್ವದಲ್ಲಿ 14 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು,ಅವರೆಲ್ಲಾ 14 ದಿಕ್ಕಿನಲ್ಲಿ ಮಾತನಾಡುತ್ತಿದ್ದಾರೆ. ಒಬ್ಬ ಸಚಿವರು ಸಂತೋಷವಾಗಿದ್ದೇವೆ ಎಂದು ಹೇಳುತ್ತಿಲ್ಲ. ಖಾತೆ ಖ್ಯಾತೆಯ ವಿಷಯದಲ್ಲಿ ಆ ಶಿವನೇ ಶಿವಕುಮಾರ್ ಅವರನ್ನು ಕಾಪಾಡಬೇಕು. ಮುಂದೆ ಸಚಿವ ಸಂಪುಟ ವಿಸ್ತರಣೆಯಾದ ನಂತರ ಇನ್ನೇನೇನು ನಡೆಯಲಿದೆಯೊ ಎಂಬುದನ್ನು ಕಾದು ನೋಡಬೇಕು ಎಂದು ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರದ ಆಡಳಿತ ವೈಖರಿ ಬಗ್ಗೆ ಈಗಲೇ ಮಾತನಾಡುವುದು ಬೇಡ. ಇನ್ನೊಂದಿಷ್ಟು ದಿನ ಕಳೆದು ಅವರು ಯಾವ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ನೋಡಿ ಆನಂತರ ಮಾತನಾಡುತ್ತೇವೆ ಎಂದರು.
ಮತದಾರರ ಪಟ್ಟಿಯಲ್ಲಿನ ದೋಷವನ್ನು ಸರಿಪಡಿಸುವ ಉದ್ದೇಶ ಕಾಂಗ್ರೆಸ್‌ಗೆ ಇಲ್ಲ. ಹಾಗಾಗಿ ವಿರೋಧಿಸುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ದೇಶದ ಜನರು ಮಾತ್ರ ಇರಬೇಕು. ಬಾಂಗ್ಲಾ ದೇಶದ ಪ್ರಜೆಗಳು, ಪಾಕಿಸ್ತಾನದವರು ಇರಬಾರದು ಅಲ್ಲವೇ. ಹಾಗಾಗಿಯೇ ಮತದಾರರ ಪಟ್ಟಿಯಲ್ಲಿ ಸ್ವಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್‌ನವರು ನೀಟ್ ಪರೀಕ್ಷೆಯ ಬಗ್ಗೆ ಆರೋಪಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿರುವ ಕೆಪಿಎಸ್ಸಿಯನ್ನೇ ಸರಿಯಾಗಿ ನಡೆಸಲು ರಾಜ್ಯ ಸರ್ಕಾರಕ್ಕೆ ಆಗಿಲ್ಲ. ಕೆಪಿಎಸ್ಸಿಯಲ್ಲಿ ಹಗರಣಗಳು, ಭ್ರಷ್ಟಾಚಾರ, ಪ್ರಶ್ನೆ ಪತ್ರಿಕೆ ಹಗರಣ ಎಲ್ಲವೂ ನಡೆದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಿಂದ ಪಿಯುಸಿ ಪರೀಕ್ಷೆಯನ್ನು ನಾಲ್ಕು ಬಾರಿ ನಡೆಸಿದರೂ ಪ್ರಶ್ನೆ ಪತ್ರಿಕೆ ಲೀಕ್ ಆಗುವುದನ್ನು ತಡೆಯಲು ಆಗಿಲ್ಲ ಎಂದು ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ಅಲ್ಪ ಸಂಖ್ಯಾತರ ಮೋರ್ಚಾದ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್, ರಾಜ್ಯ ವಕ್ತಾರ ಎಂ.ಜಿ ಮಹೇಶ್, ಎಸ್ ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ವಿಭಾಗ ಪ್ರಭಾರಿಗಳಾದ ಸ್ವಾಮಿ ಮರಳಪುರ, ಸಹ ಪ್ರಭಾರಿ ಈ.ಸಿ. ನಿಂಗರಾಜ್ ಗೌಡ, ನಗರ ವಕ್ತಾರ ಎಂ ಮೋಹನ್, ನಗರ ಪ್ರಧಾನಕಾರ್ಯದರ್ಶಿಗಳಾದ, ಬಿ ಎಂ ರಘು, ಸೋಮಸುಂದರ್, ರುದ್ರ ಮೂರ್ತಿ ಕೆ ಸಿ, ಸಹ ವಕ್ತಾರ ಕಿರಣ್ ಗೌಡ, ಜಯಶಂಕರ್, ಮುಖಂಡರಾದ ಹೇಮಾ ನಂದೀಶ್ ನಗರ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಮಾಧ್ಯಮ ನಗರ ಸಂಚಾಲಕರಾದ ಮಹೇಶ್ ರಾಜೇ ಅರಸ್, ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ ಎಂ, ನಗರಪಾಲಿಕೆಯ ಮಾಜಿ ಸದಸ್ಯ ಸಂದೇಶ್ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು..