
ಮೈಸೂರು; ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವ ಸರ್ಕಾರದ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ತಿಳಿಸಿದರು.
ಮೈಸೂರಿನ ಮೇಟಗಳ್ಳಿಯಲ್ಲಿರುವ ಜಯದೇವ ಆಸ್ಪತ್ರೆಯಲ್ಲಿ ಸಂಭವಿಸಿದ ಸಾವಿನ ಪ್ರಕರಣಗಳ ಕುರಿತಾದ ವದಂತಿಗಳ ಹಿನ್ನೆಲೆಯಲ್ಲಿ ಅವರು ಬುಧವಾರ ಜಯದೇವ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಅಧೀಕ್ಷಕರು, ಜಯಸಂಸ್ಥೆಯ ನಿರ್ದೇಶಕರೊಂದಿಗೆ ಸಭೆ ನಡೆಸಿ, ಮಾಹಿತಿಯನ್ನು ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಈಗಾಗಲೇ ಬೆಂಗಳೂರು-ಮೈಸೂರಿಗೆ 10 ಮತ್ತು ಕಲ್ಬುರ್ಗಿಗೆ 6 ಕಾರ್ಡಿಯಾಲಜಿಸ್ಟ್ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಕರೆ ನೀಡಲಾಗಿದೆ. ಇಡೀ ರಾಜ್ಯದಲ್ಲಿ 56,000 ಹುದ್ದೆಗಳ ಭರ್ತಿಗೆ ಕಾಲಮಿತಿ ನಿಗದಿಪಡಿಸಲಾಗಿದೆ ಎಂದರು.
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನೆನ್ನೆ ಒಂದೇ ದಿನ 10 ಸಾವುಗಳು ಸಂಭವಿಸಿರುವುದು ಅಸಮಾಧಾನ ತಂದಿದ್ದರೂ, ದಾಖಲಾದ ರೋಗಿಗಳು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಹೀಗಾಗಿದೆ. ಈ ಬಗ್ಗೆ ತನಿಖೆ ನಡೆಸಿ ‘ಥರ್ಡ್ ಪಾರ್ಟಿ ಇವ್ಯಾಲ್ಯೂಯೇಷನ್’ ವರದಿ ನೀಡುವಂತೆ ವೈದ್ಯರ ಸಮಿತಿಗೆ ಸೂಚಿಸಲಾಗಿದೆ ಎಂದರು.
ಜಯದೇವ ಆಸ್ಪತ್ರೆ ಇಡೀ ದೇಶಕ್ಕೆ ಮಾದರಿಯಾಗಿದೆ. ಇಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ 2 ರಿಂದ 3 ಲಕ್ಷ ವೆಚ್ಚವಾಗುವ ಸ್ಟಂಟ್ ಚಿಕಿತ್ಸೆಯನ್ನು ಇಲ್ಲಿ ಕೇವಲ 60 ಸಾವಿರಕ್ಕೆ ನೀಡಲಾಗುತ್ತಿದೆ. ಇಂತಹ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಕಾರಾತ್ಮಕ ಸುದ್ದಿ ಹರಡಿದರೆ ಬಡ ಜನರಿಗೆ ಅನ್ಯಾಯವಾಗುತ್ತದೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಲಾಭವಾಗುತ್ತದೆ ಎಂದರು.
ಜಯದೇವ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಆಡಳಿತವನ್ನು ಬೆಂಗಳೂರಿನಿAದ ವಿಕೇಂದ್ರೀಕರಣ ಗೊಳಿಸಿ, ಮೈಸೂರು ಮತ್ತು ಕಲ್ಬುರ್ಗಿ ಆಸ್ಪತ್ರೆಗಳಿಗೆ ಸ್ವಾಯತ್ತತೆ ಹಾಗೂ ಹೆಚ್ಚಿನ ಆರ್ಥಿಕ ಸ್ವಾತಂತ್ರ÷್ಯ ನೀಡಲಾಗುವುದು ಎಂದು ಹೇಳಿದರು.
ಸಾರ್ವಜನಿಕರು ಹಾಗೂ ರೋಗಿಗಳು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ದೇಶದ ಪ್ರಮುಖ ಕಾರ್ಡಿಯಾಕ್ ತೃತೀಯ ಹಂತದ ಆರೈಕೆ ಆಸ್ಪತ್ರೆಗಳಲ್ಲಿ ಮಾಸಿಕ ಮರಣ ಪ್ರಮಾಣದ ರಾಷ್ಟಿçÃಯ ಸರಾಸರಿ 9% ರಿಂದ 11% ರಷ್ಟಿರುತ್ತದೆ. ಆದರೆ, ನಮ್ಮ ಬೆಂಗಳೂರು, ಮೈಸೂರು ಹಾಗೂ ಕಲ್ಬುರ್ಗಿಯ ಜಯದೇವ ಆಸ್ಪತ್ರೆಗಳಲ್ಲಿ ಈ ಪ್ರಮಾಣ ಕೇವಲ 4% ರಿಂದ 6% ರಷ್ಟಿದೆ. ಇದು ರಾಷ್ಟಿçÃಯ ಸರಾಸರಿಗಿಂತಲೂ ಅತ್ಯಂತ ಉತ್ತಮವಾಗಿದೆ ಎಂದು ತಿಳಿಸಿದರು.
ಈ ವೇಳೆ ಜಯದೇವ ಹೃದ್ರೋಗ ನಿರ್ದೇಶಕರು ಡಾ.ದಿನೇಶ್, ಜಯದೇವ ಹೃದ್ರೋಗ ವೈದ್ಯಕೀಯ ಅಧೀಕ್ಷಕರು ಕೆ.ಎಸ್.ಸದಾನಂದ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.