Skip to main content

3Kaala News

ಸುಭಾಷಿತ 

ಬದುಕೆಂಬುದು ಚೈನಿನ ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಣ್ಣಿನ ಪರೀಕ್ಷೆ ಆಧರಿಸಿ ರೈತರು ಸಮತೋಲಿತ ಗೊಬ್ಬರ ಬಳಕೆ ಮಾಡಬೇಕು; ಮಧುಲತಾ ಹೆಚ್.ಬಿ.


ಮೈಸೂರು: ಮಣ್ಣು, ನೀರಿನ ಸಂರಕ್ಷಣೆ ಸುಸ್ಥಿರ ಕೃಷಿಗೆ ಬುನಾದಿ ಹಾಗೂ ಮಣ್ಣಿನ ಪರೀಕ್ಷೆ ಆಧರಿಸಿ ರೈತರು ಸಮತೋಲಿತ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಮಧುಲತಾ ಹೆಚ್.ಬಿ ತಿಳಿಸಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿ, ವತಿಯಿಂದ 2026-27ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಿಲ್ಲೆಯ ಟಿ.ನರಸೀಪುರ ತಾಲ್ಲೂಕು ಬನ್ನೂರು ಹೋಬಳಿಯ ತುರಗನೂರು ಗ್ರಾಮದಲ್ಲಿ “ಭತ್ತದಲ್ಲಿ ಸಮತೋಲಿತ ರಸಗೊಬ್ಬರ ಬಳಕೆ ಮತ್ತು ಸಮಗ್ರ ಪೀಡೆ ನಿರ್ವಹಣೆ’’ ಕುರಿತು ಸೋಮವಾರ ಆಯೋಜಿಸಿದ್ದ ಒಂದು ದಿನದ ಹೊರಾಂಗಣ ತರಬೇತಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾವಯವ ಗೊಬ್ಬರ, ಹಸಿರು ಗೊಬ್ಬರ ಮತ್ತು ಬೆಳೆ ಪರಿವರ್ತನೆ ಪದ್ದತಿಗಳನ್ನು ಅನುಸರಿಸಬೇಕೆಂದು ಹೇಳಿದರು.
ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಉಮಾಶಂಕರ್ ಕುಮಾರ್ ಮಾತನಾಡಿ, ರೋಗ ಬಂದ ಮೇಲೆ ಚಿಕಿತ್ಸೆ ಕೊಡುವುದಕ್ಕಿಂತ, ಬಿತ್ತನೆಗೆ ಮುನ್ನ ತಡೆಯುವುದೇ ಜಾಣತನ ಎಂದು ಹೇಳಿದರು. ಭತ್ತವನ್ನು ಕಾಡುವ ಪ್ರಮುಖ ರೋಗಗಳಾದ ಬೆಂಕಿ ರೋಗ, ದುಂಡಾಣು ಅಂಗಮಾರಿ ರೋಗ, ಕಂದುಚುಕ್ಕಿ ರೋಗ, ಉದುಬತ್ತಿ ರೋಗ, ತೆನೆ ಕವಚ ಕೊಳೆ ರೋಗಗಳನ್ನು ಆರಂಭಿಕ ಹಂತದಲ್ಲೇ ತಡೆಗಟ್ಟಲು, ಬಿತ್ತನೆಗೆ ಮುನ್ನ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು ಎಂದು ತಿಳಿಸಿದರು.
ಬೆಂಕಿ ರೋಗ ಮತ್ತು ಕಂದುಚುಕ್ಕಿ ರೋಗ ನಿಯಂತ್ರಣಕ್ಕೆ ಪ್ರತಿ ಕಿಲೋ ಗ್ರಾಂ ಬಿತ್ತನೆ ಬೀಜಕ್ಕೆ 0.4 ಗ್ರಾಂ ಕಾಬೆರ್ಂಡಾಜಿಂ ಅಥವಾ 3 ಗ್ರಾಂ ಟ್ರೈ ಸೈಕ್ಲೊಜಾಲ್ ಅಥವಾ ಟ್ರೈಪ್ಲಾಕ್ಸಿ ಸ್ಟ್ರೋಬಿನ್ ಬಳಸಿ ಬೀಜೋಪಚಾರ ಮಾಡಬೇಕು. ಬ್ಯಾಕ್ಟೀರಿಯಾ ಅಂಗಮಾರಿ ರೋಗದ ತಡೆಗೆ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ 0.5ಗ್ರಾಂ ಸ್ಪ್ರೆಪೆÇ್ಟೀಸೈಕ್ಲಿನ್ ಮಿಶ್ರಣ ಮಾಡುವುದು ಅತ್ಯಗತ್ಯ. ಬಿತ್ತನೆ ಬೀಜವನ್ನು ಪ್ಲಾಸ್ಟಿಕ್ ಹಾಳೆ ಅಥವಾ ಗೋಣಿ ಚೀಲದ ಮೇಲೆ ಹರಡಿ, ನೀರು ಚಿಮುಕಿಸಿ ಸ್ವಲ್ಪ ಒದ್ದೆ ಮಾಡಿ ನಂತರ ನಿಗದಿತ ಔಷಧವನ್ನು ಹಾಕಿ ಹದವಾಗಿ ಮಿಶ್ರಣ ಮಾಡಿ 3 ರಿಂದ 8 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆಗೆ ಬಳಸಬೇಕು. ಕಂದು ಜಿಗಿಹುಳು ಮತ್ತು ರೋಗ ಬಾಧಿತ ಪ್ರದೇಶಗಳಲ್ಲಿ ಎಂಎಂಟಿಯುಮ 1001 ನಂತಹ ರೋಗ ನಿರೋಧಕ ತಳಿಗಳ ಆಯ್ಕೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಬನ್ನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿಶಾಲು ಮಾತನಾಡಿ, ರೈತರಿಗೆ ಬೆಳೆವಿಮೆ ಹಾಗೂ ಸೆಂಟ್ರಲ್ ಐ.ಡಿ. ಮಾಡಿಸಿಕೊಳ್ಳುವ ಕುರಿತು ತಿಳಿಸಿದರು. ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ನಿವೃತ್ತ ಕೃಷಿ ಅಧಿಕಾರಿ ಸ್ವಾಮಿಗೌಡ ಅವರು ಸಮಗ್ರ ಕೃಷಿ ಪದ್ದತಿ ಹಾಗೂ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ತುರುಗನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ರೈತರು ತರಬೇತಿಗಳ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಪ್ರಸನ್ನ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಶಿವರಾಮು ಹಾಗೂ ಕೃಷಿಸಖಿಯರು ಹಾಜರಿದ್ದರು.