Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜನ ಕುಡಿಯುವ ನೀರಿಗೂ ಆತಂಕ ! ವನ್ಯಜೀವಿ ಜಲಚರಗಳಿಗೂ ಸಂಕಷ್ಟ.?

ಬಿ.ನಿಂಗಣ್ಣಕೋಟೆ,
ಎಚ್.ಡಿ.ಕೋಟೆ :
ಈ ಬಾರಿ ಪೂರ್ವ ಮುಂಗಾರು, ಮುಂಗಾರು ಕೈಕೊಟ್ಟ ಪರಿಣಾಮ ರಾಜ್ಯದಲ್ಲಿ ಅತಿ ಬೇಗ ತುಂಬುವ ಜಲಾಶಯ ಎಂಬ ಖ್ಯಾತಿ ಹೊಂದಿರುವ ಕಬಿನಿ ಜಲಾಶಯದ ನೀರಿನ ಸಂಗ್ರಹ ಮಟ್ಟದಲ್ಲಿ ತೀವ್ರ ಕುಸಿತ ಉಂಟಾಗಿದೆ.
ಜಲಾಶಯದ ಹಿನ್ನೀರು ಪ್ರದೇಶ ದಿನೇ ದಿನೇ ಬರಿದಾಗುತ್ತಿದ್ದು ಹಿನ್ನೀರು ಪ್ರದೇಶದಲ್ಲಿರುವ ವನ್ಯಜೀವಿ ಸಂಕುಲ, ಜಲಚರಗಳು ಸೇರಿದಂತೆ ನಗರ ಪಟ್ಟಣ ಗ್ರಾಮೀಣ ಪ್ರದೇಶದ ಜನ ಜಾನುವಾರುಗಳಿಗೂ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದ್ದು ಆತಂಕ ಮನೆ ಮಾಡಿದೆ.
ಕಳೆದ ವರ್ಷ ಜೂನ್ ಅಂತ್ಯದಲ್ಲಿ ಹೊತ್ತಿಗೆ ಭರ್ತಿಗೆ ಸನಿಹವಾಗಿ 2277.22 ಸಂಗ್ರಹವಿದ್ದ ಜಲಾಶಯದಿಂದ 30 ಸಾವಿರಕ್ಕೂ ಅಧಿಕ ಪ್ರಮಾಣದ ಕ್ಯೂಸೆಕ್ ನೀರನ್ನು ಮುಂಭಾಗದ ನದಿಗೆ ಹರಿಸಲಾಗುತ್ತಿತ್ತು.
ಈ ವರ್ಷ ಪೂರ್ವ ಮುಂಗಾರು ಸಂಪೂರ್ಣ ಕೈಕೊಟ್ಟು ಮುಂಗಾರು ಕೂಡ ತಡವಾಗಿರುವುದರಿಂದ ಒಳ ಹರಿವು ದಿನೇ ದಿನೇ ಕುಸಿತ ಕಾಣುತ್ತಿದೆ.
2284 ಅಡಿಗಳಷ್ಟು (19.52 ಟಿಎಂಸಿ )ಸಾಮರ್ಥ್ಯದ ಜಲಾಶಯದಲ್ಲಿ ಈಗ ಕೇವಲ 2253.41 (5.06 ಟಿಎಂಸಿ) ಮಾತ್ರ ನೀರಿನ ಸಂಗ್ರಹವಿದೆ. ಸದ್ಯ ಜಲಾಶಯ 1514 ಕ್ಯೂಸೆಕ್ ಒಳ ಹರಿವು ಹೊಂದಿದ್ದು ಬೆಂಗಳೂರು ನಗರ, ಎಚ್.ಡಿ.ಕೋಟೆ ಮತ್ತು ಸರಗೂರು ಪಟ್ಟಣ, ನಂಜನಗೂಡು, ಚಾಮರಾಜನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳ ಜನರಿಗೆ, ದನ ಕರುಗಳ ಕುಡಿಯುವ ನೀರಿಗಾಗಿ ಪ್ರತಿನಿತ್ಯ ಮುಂಭಾಗದ ನದಿಗೆ 500 ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಹರಿಸಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಜನ ಕುಡಿಯುವ ನೀರಿಗೂ ಆತಂಕ ! ವನ್ಯಜೀವಿ ಜಲಚರಗಳಿಗೂ ಸಂಕಷ್ಟ.?
ಜಲಾಶಯದಲ್ಲಿ ಈಗಿರುವ ಸಂಗ್ರಹ ಮಟ್ಟದಲ್ಲಿ ಇನ್ನೂ ಕೆಲವೇ ಕೆಲವು ಅಡಿ ಟಿಎಂಸಿ ನೀರನ್ನು ಮಾತ್ರ ಕುಡಿಯುವ ನೀರಿಗೆ ಬಳಸಲು ಮಾತ್ರ ಅವಕಾಶವಿದೆ.
ಜಲಾಶಯದ ಸುರಕ್ಷತೆ ಹಾಗೂ ತಾಲ್ಲೂಕಿನ ಹಿನ್ನೀರು ವ್ಯಾಪ್ತಿ ಪ್ರದೇಶದಲ್ಲಿ ವನ್ಯಜೀವಿ ವಲಯದ ಲಕ್ಷಾಂತರ ವನ್ಯಜೀವಿ ಸಂಪತ್ತು, ಕಣ್ಣಿಗೆ ಕಾಣದ ಲಕ್ಷಾಂತರ ವಿವಿಧ ಪ್ರಭೇಧಗಳ ಜಲಚರಗಳ ಕುಡಿಯುವ ನೀರಿನ ಹಿತ ದೃಷ್ಠಿಯಿಂದ ಡೆಡ್ ಸ್ಟೋರೆಜ್ ತಲುಪುವ ಮುನ್ನವೇ ಜಲಾಶಯದಿಂದ ನದಿಗೆ ಬಿಡಲಾಗುತ್ತಿರುವ ಬಂದ್ ಮಾಡಬೇಕಾದ ಅನಿವಾರ‍್ಯತೆ ಸೃಷ್ಠಿಯಾದರೇ,
ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟು ಪ್ರದೇಶದ ರೈತರು ಬೆಳೆಗಳು ಹಾಗೂ ಕುಡಿಯುವ ನೀರಿಗೆ ಜಲಾಶಯವನ್ನೇ ಹೆಚ್ಚು ಅಶ್ರಯಿಸಿರುವ ಬೆಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗೂ ಅಭಾವ ತಲೆ ದೂರಲಿದ್ದು, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸಾಧ್ಯ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.

ಅಚ್ಚುಕಟ್ಟು ರೈತರಲ್ಲೂ ಆತಂಕ ಶುರು;
ಬಿಸಿಲ ಬೆಗೆಗೆ ಜಲಾಶಯದ ನೀರಿನ ಸಂಗ್ರಹ ಮಟ್ಟ ದಿನೇ ದಿನೇ ಇಳಿಯುತ್ತಿರುವುದರಿಂದ ಜಲಾಶಯದ ಎಡ ಮತ್ತು ಬಲ ನಾಲಾ ವ್ಯಾಪ್ತಿಯ ರೈತರನ್ನೂ ಚಿಂತೆಗೆ ದೂಡಿದೆ, ಕಬಿನಿ ಜಲಾಶಯ ನಂಬಿ 1.80 ಲಕ್ಷಕ್ಕೂ ಹೆಚ್ಚು ಅಚ್ಚುಕಟ್ಟು ಪ್ರದೇಶದ ರೈತರಿದ್ದಾರೆ. ಈಗಿರುವ ನೀರನ್ನು ಆಶ್ರಯಿಸಿ ತಮ್ಮ ಹೊಲ ಗದ್ದೆಗಳಲ್ಲಿ ದ್ವಿ-ದಳ ಧಾನ್ಯ ಬೆಳೆ ಸೇರಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ, ಜಲಾಶಯದ ನೀರಿನ ಅವಶ್ಯಕತೆ ಇದೆ, ಕಟಾವಿಗೂ ಮೊದಲೇ ಜಲಾಶಯದಿಂದ ನಾಲೆಗಳಿಗೆ ಬಿಡಲಾಗುತ್ತಿದ್ದ ಅಲ್ಪ ಪ್ರಮಾಣದ ನೀರನ್ನು ಸಂಪೂರ್ಣ ನಿಲ್ಲಿಸಲಾಗಿದೆ, ಈ ಅನಿಶ್ಚಿತತೆಯಿಂದಾಗಿ ರೈತರು ಬೆಳೆದಿರುವ ಬೆಳೆಗಳಿಗೆ ಸಕಾಲಕ್ಕೆ ನೀರು ಸಿಗದೆ ಬೆಳೆದ ಬೆಳೆಗಳು ಬಾಯಿಗಿರಲಿ, ಕೈಗೂ ಬಾರದೆ ರೈತರಿಗೆ ನಷ್ಟವುಂಟಾಗಿ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ, ಇದೆಲ್ಲ ಚಿಂತೆಗಳು ರೈತರ ಮನದಲ್ಲಿ ಮೊಳಕೆ ಹೊಡೆದಿದ್ದು ರೈತರ ಮನದಲ್ಲಿ ಆತಂಕ ಶುರುವಾಗಿದೆ.

ಇನ್ನಾದರೂ ವರುಣದೇವನ ಕೃಪೆಯಿಂದ ಕೇರಳದ ವೈನಾಡು ಪ್ರದೇಶ ಮತ್ತು ಕಬಿನಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ವರುಣಾರ್ಭಟ ಶುರುವಾದರೆ ಜಲಾಶಯಕ್ಕೆ ಹೆಚ್ಚು ಹೆಚ್ಚು ಪ್ರಮಾಣದ ನೀರು ಹರಿದು ಬಂದು ತಲೆದೂರಿರುವ ನೀರಿನ ಸಂಕಷ್ಟ ದೂರಾಗಲಿದೆ.
ತಪ್ಪಿ ಮುಂಗಾರು ಇನ್ನಷ್ಟು ತಡವಾಗಿ ಮುಂಗಾರು ಅನಿಶ್ಚಿತತೆ ಮುಂದುವರಿದರೇ ಕಬಿನಿ ಜಲಾಶಯ ಅಚ್ಚುಕಟ್ಟು ವ್ಯಾಪ್ತಿಯ ರೈತರ ಬೆಳೆ ನಷ್ಟದ ಜತೆಗೆ ಕಬಿನಿ ನೀರನ್ನೇ ಆಶ್ರಯಿಸಿರುವ ಲಕ್ಷಾಂತರ ವನ್ಯಜೀವ ಸಂಕುಲ, ಜಲಚರಗಳು, ಜಾನುವಾರುಗಳು ಸೇರಿದಂತೆ ಬೆಂಗಳೂರು ನಗರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿ ತೀವ್ರ ಬರದ ಛಾಯೆ ಅವರಿಸಲಿದೆ.


————-ಬಾಕ್ಸ್————-
ಕಳೆದ ವರ್ಷಕ್ಕೆ ಹೋಲಿಸಿದರೇ ಪೂರ್ವ ಮುಂಗಾರು ಮುಂಗಾರು ಮಳೆ ಕೈಕೊಟ್ಟ ಕಾರಣ ಜಲಾಶಯ ನೀರಿನ ಸಂಗ್ರಹ ಮಟ್ಟದಲ್ಲಿ ಈ ವರ್ಷ ತೀವ್ರ ಕುಸಿತ ಕಂಡಿದೆ. ನೆನ್ನೆಯಿಂದ ಅಲ್ಪ ಪ್ರಮಾಣದ ಒಳರಿವು ಆರಂಭಗೊಂಡಿದ್ದು, ವೈನಾಡು ಪ್ರದೇಶದಲ್ಲಿ ಮುಂಗಾರು ಆರ್ಭಟಿಸಿದರೆ ಕುಡಿಯುವ ನೀರಿಗೆ ಸಮಸ್ಯೆ ಆಗುವುದಿಲ್ಲ.
ರಂಗಯ್ಯ. ಕಾರ್ಯಪಾಲಕ ಇಂಜಿನಿಯರ್ ,
ಕಬಿನಿ ಜಲಾಶಯ, ಬೀಚನಹಳ್ಳಿ