Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಾವೇರಿ ನೀರು ಕುರಿತ ಉಭಯ ರಾಜ್ಯಗಳ ಸಿಎಂಗಳ ಮಾತುಕತೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳನ್ನು ಬೆಸೆಯುವ ಸೌಹಾರ್ದದ ಸಂಕೇತವಾಗಬೇಕು; ಕುರುಬೂರು ಶಾಂತಕುಮಾರ್


ಮೈಸೂರು; ಕಾವೇರಿ ನೀರು ಕುರಿತ ಉಭಯ ರಾಜ್ಯಗಳ ಸಿಎಂಗಳ ಮಾತುಕತೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳನ್ನು ಬೆಸೆಯುವ ಸೌಹಾರ್ದದ ಸಂಕೇತವಾಗಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾವೇರಿ ಜೀವನದಿಯು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳನ್ನು ಬೆಸೆಯುವ ಸೌಹಾರ್ದದ ಸಂಕೇತವಾಗಬೇಕು. ಕೋರ್ಟ್-ಕಚೇರಿಗಳ ಸುದೀರ್ಘ ವ್ಯಾಜ್ಯಗಳಿಗಿಂತ, ಎರಡು ರಾಜ್ಯಗಳ ನಾಯಕರು ಪರಸ್ಪರ ಗೌರವ ಮತ್ತು ಸೌಹಾರ್ದತೆಯಿಂದ ಕೈಗೊಳ್ಳುವ ನಿರ್ಧಾರಗಳು, ಕೋಟಿಗಟ್ಟಲೆ ರೈತರ ಮತ್ತು ನಾಗರಿಕರ ಜೀವನದಲ್ಲಿ ನೆಮ್ಮದಿ ತರಬಲ್ಲವು.” ಎಂಬುದನ್ನು ಗಂಭೀರವಾಗಿ ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕಾವೇರಿ ನೀರಿನ ವಿಚಾರ, ಮೇಕೆದಾಟು ನಿರ್ಮಾಣ ಸೌಹಾರ್ದ ಮಾತುಕತೆಗಾಗಿ ಆಗಸ್ಟ್ ೩ ರಂದು ಕರ್ನಾಟಕಕ್ಕೆ ಆಗಮಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರು ವಿವಾದವನ್ನು ಸೌಹಾರ್ದಯುತ ಪರಿಹರಿಸಬೇಕು. ದಶಕಗಳ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಘರ್ಷದ ಹಾದಿಗಿಂತ ಸೌಹಾರ್ದಯುತ ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳುವುದು ಉಭಯ ರಾಜ್ಯಗಳ ಹಿತದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಈ ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ, ಚರ್ಚೆಯು ಯಶಸ್ವಿಯಾಗಲು ಹಾಗೂ ಎರಡೂ ರಾಜ್ಯಗಳ ರೈತರು ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಯಲು ಕೆಳಗಿನ ಪ್ರಮುಖ ಅಂಶಗಳತ್ತ ಗಮನಹರಿಸಲು ಸಲಹೆ ನೀಡಲಾಗುತ್ತಿದೆ:
ಪ್ರಮುಖ ಸಲಹೆಗಳು ಮತ್ತು ಮನವಿ ಅಂಶಗಳು:
ನೈಜ ಪರಿಸ್ಥಿತಿಯ ಪರಾಮರ್ಶೆ ಮತ್ತು ಅಭಾವದ ಹಂಚಿಕೆ. ಮಳೆಯ ಅಭಾವ ಉಂಟಾಗುವ ವರ್ಷಗಳಲ್ಲಿ ಕಾವೇರಿ ಜಲಾಶಯಗಳಲ್ಲಿನ ನೀರಿನ ನೈಜ ಸಂಗ್ರಹಣೆಯನ್ನು ಆಧರಿಸಿ, ವೈಜ್ಞಾನಿಕ ಹಾಗೂ ನ್ಯಾಯಸಮ್ಮತ `ಅಭಾವ ಹಂಚಿಕೆ ಸೂತ್ರ’ವನ್ನು ರೂಪಿಸಲು ಒತ್ತು ನೀಡಬೇಕು.
ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳ ಕುಡಿಯುವ ನೀರಿನ ಭದ್ರತೆ ಮತ್ತು ತಮಿಳುನಾಡಿನ ಕಾವೇರಿ ಅಚ್ಚುಕಟ್ಟು ಪ್ರದೇಶದ ಕುಡಿಯುವ ನೀರಿನ ಅಗತ್ಯತೆಗಳನ್ನು ರಾಜಕೀಯದಿಂದ ಹೊರತಾಗಿ ಮೊದಲ ಆದ್ಯತೆಯಾಗಿ ಪರಿಗಣಿಸಬೇಕು.
ಉಭಯ ರಾಜ್ಯಗಳ ನೀರಾವರಿ ತಜ್ಞರು, ಹವಾಮಾನ ತಜ್ಞರು ಕಾನೂನು ಪರಾಣಿತರು ಮತ್ತು ಅಧಿಕಾರಿಗಳನ್ನೊಳಗೊಂಡ ಸಕ್ರಿಯ ‘ಜಂಟಿ ತಾಂತ್ರಿಕ ಸಮಿತಿ’ಯನ್ನು ರಚಿಸಿ, ಉಪಗ್ರಹ ಆಧಾರಿತ ಮಾಹಿತಿ ಹಾಗೂ ಜಲಾಶಯಗಳ ನೈಜ ಸ್ಥಿತಿಗತಿಯನ್ನು ಆಧರಿಸಿ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ಜಾರಿಯಾಗಬೇಕು.
ಕಳೆದ ವರ್ಷ ಹೆಚ್ಚು ಮಳೆ ಬಂದಾಗ ಸುಮಾರು ೨೫೦ ಟಿಎಂಸಿ ನೀರು ಸಮುದ್ರ ಹರಿದಿದೆ. ಈ ವರ್ಷ ಬರಗಾಲ ಬಂದಿದೆ ಮಳೆ ಕಡಿಮೆಯಾಗಿದೆ ಇಂತಹ ಸಂದರ್ಭದಲ್ಲಿ ಸಮುದ್ರಕ್ಕೆ ಹರಿದು ಹೋಗುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು, ಮೇಕೆದಾಟು ಯೋಜನೆ ಕುರಿತು ಸೌಹಾರ್ದ ಮಾತುಕತೆ ಅವಶ್ಯಕ.
ಮೇಕೆದಾಟು ಸಮತೋಲನ ಜಲಾಶಯ ಯೋಜನೆಯು ಮಳೆಯ ಅಭಾವದ ಸಂದರ್ಭದಲ್ಲಿ ತಮಿಳುನಾಡಿಗೂ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಳ್ಳಲು ನಿಯಂತ್ರಿತವಾಗಿ ಹರಿಸಲು ಸಹಕಾರಿಯಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಯೋಜನೆಯ ಅನುಷ್ಠಾನಕ್ಕೆ ಸಕಾರಾತ್ಮಕ ಬೆಂಬಲ ಪಡೆಯುವುದು.
ರೈತರ ಹಿತರಕ್ಷಣೆ ಮತ್ತು ಬೆಳೆ ಪದ್ಧತಿ:
ಎರಡೂ ರಾಜ್ಯಗಳಲ್ಲಿ ಲಭ್ಯವಿರುವ ನೀರಿಗೆ ತಕ್ಕಂತೆ ಕಡಿಮೆ ನೀರು ಬಳಸುವ ಆಧುನಿಕ ಕೃಷಿ ಪದ್ಧತಿ ಹಾಗೂ ಕೃಷಿ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡಲು ಜಂಟಿ ಯೋಜನೆಗಳನ್ನು ರೂಪಿಸುವುದು.
ಮುಖ್ಯ ಸಂದೇಶ:ಆಗಸ್ಟ್ ೩ರ ಸೌಹಾರ್ದ ಸಭೆಯು ಕೇವಲ ಔಪಚಾರಿಕ ಭೇಟಿಯಾಗದೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಹೊಸ ಪರಸ್ಪರ ಸಹಕಾರದ ಅಧ್ಯಾಯಕ್ಕೆ ಮುನ್ನುಡಿಯಾಗಲಿ ಎಂದು ಆಗ್ರಹಿಸಿದ್ದಾರೆ.