
*ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು.
ಮೈಸೂರು: ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಶನಿವಾರ ಆಗಮಿಸಿದ ಡಿ.ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು.
ಮೈಸೂರಿಗೆ ಆಗಮಿಸಿದ ಅವರಿಗೆ ವಿಳ್ಳೇದೆಲೆಯಿಂದ ಮಾಡಿದ ಭಾರೀ ಗಾತ್ರದ ಹಾರವನ್ನು ಕ್ರೇನ್ ಮೂಲಕ ಹಾಕಿ ಸ್ವಾಗತ ಕೋರಲಾಯಿತು.
ನಗರದ ಕಾರಂಜಿಕೆರೆ ವೃತ್ತದ ಬಳಿ ಜಮಾವಣೆಗೊಂಡ ಪಕ್ಷದ ಕಾರ್ಯಕರ್ತರು ಡಿ.ಕೆಶಿವಕುಮಾರ್ ಅವರನ್ನು ಸ್ವಾಗತಿಸಿ ಮೆರವಣಿಗೆ ನಡೆಸಿದರು. ಡಿಕೆಶಿ ಭಾವಚಿತ್ರ ಹಿಡಿದು ಘೋಷಣೆ ಕೂಗಿದರು. ಅಭಿಮಾನಿಯೊಬ್ಬರು ನೊಣವಿನಕೆರೆ ಅಜ್ಜಯ್ಯನ ಫೋಟೊ ಪ್ರೇಮ್ ಹಿಡಿದು ನಿಂತಿದ್ದರು. ನಗರದ ವಿವಿಧೆಡೆ ಮುಖ್ಯಮಂತ್ರಿಗೆ ಸ್ವಾಗತ ಕೋರುವ ಪ್ಲೆಕ್ಸ್ ಗಳನ್ನು ಅಳವಡಿಸಲಾಗಿತ್ತು. ಡಿ.ಕೆ. ಶಿವಕುಮಾರ್ ಭರ್ಜರಿ ರೋಡ್ಶೋ ನಡೆಸಿದರು. ಕಾರಂಜಿ ಕೆರೆಯಿಂದ ಆರಂಭಗೊAಡ ಈ ಬೃಹತ್ ರೋಡ್ಶೋ ಕುರುಬರಹಳ್ಳಿ ಸರ್ಕಲ್ವರೆಗೂ ವಿಸ್ತರಿಸಿತ್ತು. ನಂತರ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಾರ್ಥಿಸಿದರು.
ಬಳಿಕ ಹೊರಗೆ ಬಂದು ಈಡುಗಾಯಿಗಳನ್ನು ಒಡೆದು ಹರಿಕೆ ತೀರಿಸಿದರು.
ಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಂಸದ ಸುನೀಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಹರೀಶ್ ಗೌಡ, ಅನಿಲ್ ಚಿಕ್ಕಮದು, ರವಿಶಂಕರ್ ಸಾಥ್ ನೀಡಿದರು.
ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸುವ ಸಲುವಾಗಿ ಜುಲೈ 31ರಂದು ನಗರದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಪ್ರಧಾನಿ ಭೇಟಿ, ಭದ್ರತೆ ಮೊದಲಾದ ಕಾರಣಗಳಿಂದ ಕಾರ್ಯಕ್ರಮವನ್ನು ರದ್ದು ಗೊಳಿಸಲಾಯಿತು.