
ಮೈಸೂರು: ರಾಜ್ಯ ಸಚಿವ ಸಂಪುಟ ಪುನರ್‌ರಚನೆಯಲ್ಲಿ ಮೈಸೂರಿನ ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಅವರ ಅಭಿಮಾನಿಗಳು ತೀವ್ರ ಪ್ರತಿಭಟನೆ ನಡೆಸಿದ್ದು, ದೊಡ್ಡ ಹೈಡ್ರಾಮವೇ ನಡೆಯಿತು. ತನ್ವೀರ್ ಸೇಠ್‌ರ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.
ಪ್ರತಿಭಟನೆ ವೇಳೆ ತನ್ವೀರ್ ಸೇಠ್‌ರ ಕಟ್ಟ ಬೆಂಬಲಿಗ ತಬ್ರೇಜ್ ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಸೇವಿಸಿದ ತಕ್ಷಣ ಆತನ ಆರೋಗ್ಯದಲ್ಲಿ ಏರುಪೇರಾಗಿದ್ದು, ಸ್ಥಳದಲ್ಲಿದ್ದವರು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯ ವೈದ್ಯರ ಮಾಹಿತಿ ಪ್ರಕಾರ, ತಬ್ರೇಜ್‌ಗೆ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆ ಶಾಸಕ ತನ್ವೀರ್ ಸೇಠ್ ಅವರ ನಿವಾಸದ ಎದುರು ಬೆಂಬಲಿಗರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಕೆಲಕಾಲ ಮನೆ ಎದುರು ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಹೈಡ್ರಾಮವೇ ನಡೆಯಿತು.
ತನ್ವೀರ್ ಸೇಠ್ ನಿವಾಸದ ಎದುರು ಬೆಂಬಲಿಗರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ಮು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲ ಕಾಲ ಮನೆ ಎದುರು ಆತಂಕದ ವಾತಾವರಣ ನಿರ್ಮಾಣವಾಗಿ, ಹೈಡ್ರಾಮವೇ ನಡೆಯಿತು. ತನ್ವೀರ್ ಸೇಠ್ ಸುತ್ತುವರಿದ ಅಭಿಮಾನಿಗಳು ಹಾಗೂ ಕಾರ್ಯಕರ್ತರು, ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು. ಪೇಮೇಂಟ್ ಕೊಟ್ಟವರಿಗೆ ಮಾತ್ರ ಅವಕಾಶ ಕೊಡಲಾಗಿದೆ ಎಂದು ಕೆಲವರು ದೂರಿದರು. ಕೆಲವರು ಕಣ್ಣೀರು ಹಾಕಿ ಸಚಿವ ಸ್ಥಾನ ಸಿಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಉದಯಗಿರಿ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
ರಸ್ತೆ ತಡೆದು ಪ್ರತಿಭಟನೆ;
ತನ್ವೀರ್‌ಸೇಠ್ ಅಭಿಮಾನಿಗಳು ಬೆಂಗಳೂರು-ಮೈಸೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ತನ್ವಿರ್ ಸೇಠ್ ಬೆಂಬಲಿಗನೋರ್ವ ಪೆಟ್ರೋಲ್ ಸುರಿದುಕೊಳ್ಳಲು ಮುಂದಾದ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆತನ ಕೈಯಿಂದ ಪೆಟ್ರೋಲ್ ಬಾಟಲ್ ಕಸಿದುಕೊಂಡರು. ದಿಢೀರ್ ಪ್ರತಿಭಟನೆಯಿಂದಾಗಿ ಕೆಲಕಾಲ ವಾಹನಗಳ ಸಂಚಾರ ಅಸ್ತ÷್ಯವ್ಯಸ್ತವಾಯಿತು. ರಸ್ತೆಯಲ್ಲೇ ಮಲಗಿ ನ್ಯಾಯ ಬೇಕು ಎಂದು ಅಗ್ರಹಿಸಿದರು. ವಾಹನ ದಟ್ಟಣೆ ಉಂಟಾಗಿ ಕಿಲೊ ಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತವು.
ಬಳಿಕ ಪೊಲೀಸರು ಪ್ರತಿಭಟನಾಕಾರರನ್ನುವಶಕ್ಕೆ ತೆಗೆದುಕೊಂಡು, ವ್ಯಾನಿಗೆ ಹತ್ತಿಸಿ, ಕರೆದುಕೊಂಡು ಹೋದರು. ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈಗ ಶಾಸಕ ತನ್ವೀರ್ ಸೇಠ್ ಕ್ಷೇತ್ರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ತಮ್ಮ ಬೆಂಬಲಿಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿದ ಶಾಸಕ ತನ್ವೀರ್ ಸ್ಭೆಠ್, ಆಸ್ಪತ್ರೆಗೆ ಭೇಟಿ ನೀಡಿ, ಆತನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಯಾವುದೇ ಕಾರಣಕ್ಕೂ ಇಂತಹ ದುಡುಕಿನ ನಿರ್ಧಾರಗಳನ್ನು ಅಭಿಮಾನಿಗಳು, ಬೆಂಬಲಿಗರು ಕೈಗೊಳ್ಳಬಾರದು ಎಂದು ಹೇಳಿದರು.