Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೀನುಗಾರರ ಆರ್ಥಿಕ ಭದ್ರತೆಗಾಗಿ ಜಲಕೃಷಿ ವಿಮೆ ಕುರಿತು ಜಾಗೃತಿ ಅಗತ್ಯ: ವರುಣ್ ಎಸ್.


ಮೈಸೂರು: ಜಲಕೃಷಿ ಕ್ಷೇತ್ರದಲ್ಲಿ ಅಪಾಯ ನಿರ್ವಹಣೆಗೆ ವಿಮೆಯು ಅತ್ಯಂತ ಪರಿಣಾಮಕಾರಿ ಸಾಧನವಾಗಿದ್ದು, ಜಲಕೃಷಿಕರಲ್ಲಿ ವಿಮೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಚಿಡಿಯಾದ ಪ್ರಾದೇಶಿಕ ವ್ಯವಸ್ಥಾಪಕÀ ವರುಣ್ ಎಸ್. ತಿಳಿಸಿದರು.
ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (ಎಐಸಿ), ಪ್ರಾದೇಶಿಕ ಕಚೇರಿ, ಬೆಂಗಳೂರು ವತಿಯಿಂದ ಜಲಕೃಷಿಕರಲ್ಲಿ ವಿಮೆ, ಸುಸ್ಥಿರ ಜಲಕೃಷಿ ಪದ್ಧತಿಗಳು, ರೋಗ ನಿರ್ವಹಣೆ, ಅಪಾಯ ಜಲಕೃಷಿ ವಿಮೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಪ ಮಹಾಪ್ರಬಂಧಕ ನಾಗರಾಜನ್ ಕೆ. ಮಾತನಾಡಿ ಪ್ರಕೃತಿ ವಿಕೋಪ, ರೋಗ ಹರಡುವಿಕೆ ಹಾಗೂ ಇತರ ಅನಿರೀಕ್ಷಿತ ಕಾರಣಗಳಿಂದ ಉಂಟಾಗುವ ಆರ್ಥಿಕ ನಷ್ಟದಿಂದ ಜಲಕೃಷಿಕರನ್ನು ರಕ್ಷಿಸುವಲ್ಲಿ ಜಲಕೃಷಿ ವಿಮೆಯು ಮಹತ್ವದ ಪಾತ್ರ ವಹಿಸುತ್ತದೆ. ವಿಮೆಯ ಮೂಲಕ ರೈತರು ಆರ್ಥಿಕ ಸ್ಥಿರತೆ ಹಾಗೂ ಭದ್ರತೆಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಐಸಿಎಆರ್–ಸಿಐಎಫ್‌ಎ ಪ್ರಾದೇಶಿಕ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಸತೀಶ ಅವುಂಜೆ ಮಾತನಾಡಿ, ಜಲಕೃಷಿಯ ತಾಂತ್ರಿಕ ಹಾಗೂ ವೈಜ್ಞಾನಿಕ ಅಂಶಗಳ ಕುರಿತು ಉಪನ್ಯಾಸ ನೀಡಿ, ವೈಜ್ಞಾನಿಕ ಜಲಕೃಷಿ ಪದ್ಧತಿಗಳು, ಕೆರೆ ನಿರ್ವಹಣೆ, ಉತ್ಪಾದನಾ ತಂತ್ರಜ್ಞಾನಗಳು ಹಾಗೂ ರೋಗ ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ನೀಡಿದರು. ಉತ್ಪಾದಕತೆ ಹೆಚ್ಚಿಸಲು ಹಾಗೂ ಜಲಕೃಷಿಯ ಸುಸ್ಥಿರ ಅಭಿವೃದ್ಧಿಗೆ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಗಿರೀಶ ಓಂಕಾರ್, ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್‌ನ ಆಡಳಿತಾಧಿಕಾರಿ ನವೀನ್ ಕುಮಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ವಿಮಾ ಸಂಸ್ಥೆಯ ಪ್ರತಿನಿಧಿಗಳು, ತಾಂತ್ರಿಕ ತಜ್ಞರು ಹಾಗೂ ಜಲಕೃಷಿಕರ ನಡುವೆ ಸಮಾಲೋಚನೆ ನಡೆಯಿತು. ಜಲಕೃಷಿ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸವಾಲುಗಳು, ರೋಗ ನಿರ್ವಹಣೆ, ವೈಜ್ಞಾನಿಕ ಕೃಷಿ ಪದ್ಧತಿಗಳು, ಸುಸ್ಥಿರ ತಂತ್ರಜ್ಞಾನಗಳ ಅಳವಡಿಕೆ ಹಾಗೂ ವಿಮಾ ರಕ್ಷಣೆಯ ಅಗತ್ಯತೆಯ ಕುರಿತು ಅಭಿಪ್ರಾಯ ವಿನಿಮಯ ನಡೆಯಿತು.

ಜಲಕೃಷಿ ವಿಮೆಯ ಕುರಿತು ಹೆಚ್ಚಿನ ಜಾಗೃತಿ, ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಿಂದ ಜಲಕೃಷಿಕರ ಜೀವನೋಪಾಯವನ್ನು ಭದ್ರಪಡಿಸುವುದರ ಜೊತೆಗೆ ರಾಜ್ಯದಲ್ಲಿ ಜಲಕೃಷಿ ಕ್ಷೇತ್ರದ ಸುಸ್ಥಿರ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಮೈಸೂರು, ರಾಮನಗರ, ಕೊಡಗು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಉಪನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು, ಹಾಗೂ ವ್ಯವಸ್ಥಾಪಕರಾದ ಜಯಂತಿ ಹರಿಹರನ್, ಜಲಕೃಷಿಕರು ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.