
ಪಿರಿಯಾಪಟ್ಟಣ : ತಂಬಾಕು ಹದ ಮಾಡುವ (ಕ್ಯೂರಿಂಗ್) ವೇಳೆ ಆಕಸ್ಮಿಕವಾಗಿ ತಂಬಾಕು ಬ್ಯಾರನ್ ಗೆ ಬೆಂಕಿ ತಗುಲಿ, ಲಕ್ಷಂತರ ರೂ. ಮೌಲ್ಯದ ತಂಬಾಕು ಹಾಗೂ ಬ್ಯಾರನ್ ಕಟ್ಟಡ ಭಸ್ಮವಾಗಿರುವ ಘಟನೆ ತಾಲ್ಲೂಕಿನ ಹರಿಲಾಪುರ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಸಿಂಗ್ರಯ್ಯರವರು ತಮ್ಮ 3 ಎಕರೆ ಜಮೀನಿನಲ್ಲಿ ತಂಬಾಕು ಬೆಳೆದಿದ್ದರು ತಂಬಾಕು ಹದ ಮಾಡುವ ಸಂದರ್ಭದಲ್ಲಿ ಬ್ಯಾರನ್ ಗೆ ಆಕಸ್ಮಿಕ ಬೆಂಕಿ ತಗುಲಿ ತಂಬಾಕು ಕಟ್ಟಿದ್ದ 700 ಕ್ಕೂ ಹೆಚ್ಚು ಕಡ್ಡಿಗಳು ಹಾಗೂ ಬ್ಯಾರನ್ ಕಟ್ಟಡ ಸುಟ್ಟುಹೋಗಿದೆ.
ವ್ಯವಸಾಯಕ್ಕಾಗಿ 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದೇನೆ. ಈ ಸಾಲ ತೀರಿಸುವ ದಾರಿ ಯಾವುದು ಎಂದು ನೊಂದ ರೈತ ಸಿಂಗ್ರಯ್ಯ ತಮ್ಮ ಅಳಲು ತೊಂಡಿಕೊಂಡಿದ್ದಾರೆ ಹಾಗೂ ಸರ್ಕಾರ ನಷ್ಟ ಪರಿಹಾರ ಒದಗಿಸಿಕೊಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಗ್ನಿ ಶಾಮಕ ವಾಹನ ಬರಲು ಸ್ಥಳವಿಲ್ಲ :
ನೊಂದ ರೈತನ ಸಂಬಂಧಿಕಾರದ ಸುಬ್ಬು ಮಾತನಾಡಿ ಬ್ಯಾರನ್ ಗೆ ಬೆಂಕಿ ತಗುಲಿದ ವಿಷಯವನ್ನು ಕೂಡಲೆ ಅಗ್ನಿ ಶಾಮಕ ಅಧಿಕಾರಿಗಳಿಗೆ ತಿಳಿಸಿದೆವು. ತಕ್ಷಣ ಬಂದರೂ ಕೂಡ ಮುಖ್ಯ ರಸ್ತೆಯಿಂದ ಜಮೀನಿನ ಬಳಿಗೆ ಬರಲು ರಸ್ತೆ ಇಲ್ಲದ ಕಾರಣ ವಾಪಸ್ಸು ಹೋದರು. ಆದರೆ ಅಗ್ನಿ ಶಾಮಕ ವಾಹನ ಬರಲು ಸ್ಥಳವಿದಿದ್ದರೆ ಹೆಚ್ಚಿನ ಅನಾಹುತ ತಪ್ಪಿಸಬಹುದಿತ್ತು. ಈ ಭಾಗದಲ್ಲಿ 15ಕ್ಕೂ ಹೆಚ್ಚು ಮನೆಗಳಿದ್ದು, 50 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಇನ್ನೂ ಅನೇಕ ರೈತರು ತಂಬಾಕು ಬ್ಯಾರನ್ ಹೊಂದಿದ್ದಾರೆ. ಆದರಿಂದ್ದ ಅಧಿಕಾರಿಗಳು ಈ ಕೂಡಲೇ ಜಮೀನಿಗೆ ಸಂಪರ್ಕ ರಸ್ತೆ ಕಲ್ಪಿಸಿ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದರು.