
ನ0ಜನಗೂಡು: ರೈತರು ಮುಂಗಾರು ಹಂಗಾಮಿನಲ್ಲಿ ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳ ಆಯ್ಕೆ ಮಾಡುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಮಂಜುಳ ಎಂ.ಬಿ. ಹೇಳಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿ ಕೃಷಿ ಕೇಂದ್ರದ ವತಿಯಿಂದ 2026-27ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನಂಜನಗೂಡು ತಾಲ್ಲೂಕು ಕಸಬಾ ಹೋಬಳಿಯ ನವಿಲೂರು ಗ್ರಾಮದಲ್ಲಿ ಹವಾಮಾನ ವೈಪರೀತ್ಯಕ್ಕೆ ಪರ್ಯಾಯ ಬೆಳೆ ಪದ್ದತಿಗಳು ಹಾಗೂ ಬರ ಪರಿಸ್ಥಿತಿಯಲ್ಲಿ ಜಾನುವಾರುಗಳ ನಿರ್ವಹಣೆ ಕುರಿತು ಆಯೋಜಿಸಿದ್ದ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2026-27ರ ಮುಂಗಾರು ಹಂಗಾಮಿನಲ್ಲಿ ಮಳೆಯು ಆಶಾದಾಯಕವಾಗಿಲ್ಲವೆಂದು ಹವಾಮಾನ ಇಲಾಖೆಯ ತಜ್ಞರು ತಿಳಿಸಿರುವುದರಿಂದ, ರೈತರು ಈ ಮುಂಗಾರು ಹಂಗಾಮಿನಲ್ಲಿ ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳ ಆಯ್ಕೆ ಮಾಡುವುದು ಅವಶ್ಯಕವಾಗಿರುತ್ತದೆ. ರೈತರು ಪ್ರಸ್ತುತ ಪರಿಸ್ಥಿತಿಯಲ್ಲಿ ಬರಸಹಿಷ್ಣುತೆ ಹೊಂದಿರುವ ಅಲ್ಪಾವಧಿ ಮತ್ತು ಮಧ್ಯಮಾವಧಿ ರಾಗಿ ಹಾಗೂ ದ್ವಿದಳ ಧಾನ್ಯಗಳಾದ ಅಲಸಂದೆ ಮತ್ತು ಅವರೆ ಬೆಳೆಯುವುದು ಸೂಕ್ತ ಎಂದು ತಿಳಿಸಿದರು.
ಬರ ಸಹಿಷ್ಣತೆಯನ್ನು ಹೆಚ್ಚಿಸಲು ಬೀಜ ಗಟ್ಟಿಗೊಳಿಸುವಿಕೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಹಾಗೂ ಹಂತ ಹಂತವಾಗಿ ಸಾವಯವ ಕೃಷಿ ಅಳವಡಿಕೆ ಮಾಡಿಕೊಳ್ಳಲು ತಿಳಿಸಿದರು.
ಸಸ್ಯ ರೋಗ ಶಾಸ್ತ್ರಜ್ಞರಾದ ಡಾ. ಪುಷ್ಪ ಆರ್. ಎನ್. ಮಾತನಾಡಿ, ಹವಾಮಾನ ವೈಪರೀತ್ಯಕ್ಕೆ ಪರ್ಯಾಯ ಬೆಳೆ ಪದ್ದತಿಗಳು ಮತ್ತು ಕೃಷಿ ಬೆಳೆಗಳಲ್ಲಿ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಸಿದ್ಧಲಿಂಗಪುರ ಪಶುಚಿಕಿತ್ಸಾಲಯದ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಅಶೋಕ್ ಕುಮಾರ್ ಮಾತನಾಡಿ, ಬರ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಒದಗಿಸಬಹುದಾದ ಮೇವು ಮತ್ತು ಪೋಷಕಾಂಶಗಳು ಮತ್ತು ಜಾನುವಾರುಗಳಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳು ಮತ್ತು ಅವುಗಳ ನಿರ್ವಹಣೆ ಬಗ್ಗೆ ತಿಳಿಸಿದರು. ಕಸಬಾ ಹೋಬಳಿ ಕೃಷಿ ಅಧಿಕಾರಿ ಮಾಧುರಿ ಪಿ. ರವರು ಕೃಷಿ ಇಲಾಖೆ ಯೋಜನೆಗಳ ಸಹಾಯಧನದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹೋಬಳಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕಿ ದಿವ್ಯ, ಗ್ರಾಮದ ಮುಖಂಡರಾದ ಮಹದೇವಪ್ಪ, ಲೀಲಾಮೂರ್ತಿ, ನಿಂಗರಾಜಪ್ಪ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.