
ಮೈಸೂರು; ಹಿಂದುಳಿದ ವರ್ಗಗಳ ಕೋಟಾದಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸತತವಾಗಿ 4ನೇ ಭಾರಿಗೆ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಕೆಲಸ ಮಾಡುತ್ತಿರುವ ಮಾಜಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿಗೆ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮೈಸೂರು ಜಿಲ್ಲಾ ಭಗೀರಥ ಉಪ್ಪಾರ ಸಂಘ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದೆ.
ಗುರುವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಸ್. ಯೋಗಿಶ ಉಪ್ಪಾರ, ಇಡೀ ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ಉಪ್ಪಾರ ಸಮಾಜವು 25 ರಿಂದ 30 ಲಕ್ಷ ಮತದಾರರಿದ್ದು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯಾದ್ಯಂತ ಉಪ್ಪಾರ ಸಮಾಜವು ಅತಿ ಹೆಚ್ಚಿನ ಬೆಂಬಲವನ್ನು ನೀಡುವ ಮೂಲಕ, 136 ಕ್ಷೇತ್ರಗಳಲ್ಲಿ ಜಯಗಳಿಸಿ, ಸರಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದೆ. ಹಾಗಾಗಿ ಚಾಮರಾಜನಗರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸತತವಾಗಿ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷವು ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡಿ, ಹಿಂದುಳಿದ ವರ್ಗಕ್ಕೆ ಸೇರಿರುವ, ಉಪ್ಪಾರ ಸಮಾಜದ ಏಕೈಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರನ್ನು ಮುಗಿಸುವ ಹುನ್ನಾರ ನಡೆಸಿತು. ಆದರೆ ಕ್ಷೇತ್ರದ ಮತದಾರರು ಸ್ಥಳೀಯ ಅಭ್ಯರ್ಥಿಗೆ ಮತವನ್ನು ನೀಡಿ, ಅವರನ್ನು ಜಯಗಳಿಸುವಲ್ಲಿ ಸಫಲರಾಗಿದ್ದಾರೆ. ಸುಮಾರು 35 ರಿಂದ 40 ಕ್ಷೇತ್ರಗಳಲ್ಲಿ ನಿರ್ಣಾಯಕ ಮತಗಳಿದ್ದು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷವು ಉಪ್ಪಾರ ಸಮಾಜಕ್ಕೆ ಟಿಕೆಟ್ ನೀಡದ ಕಾರಣ, ಒಕ್ಕೊರೊಲಿನಿಂದ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ನೀಡಿ ಬಹುಮತ ಪಡೆಯಲು ಸಹಕರಿಸಿದ್ದೇವೆ.
ಅಲ್ಲದೆ, ಹಿಂದೆ ಸಮಿಶ್ರ ಸರ್ಕಾರದಲ್ಲಿ ಸಿ. ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಈ ಬಾರಿ ಉತ್ತಮ ಖಾತೆಯ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷವೂ ಈ ಬಾರಿ ಉಪ್ಪಾರ ಸಮಾಜದ ಮುಂಚೂಣಿ ನಾಯಕರನ್ನು ಗುರುತಿಸಿ, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಗೌರವ ಸಲಹೆಗಾರ ಮರಿಸ್ವಾಮಿ, ಖಜಾಂಚಿ ಗೋವಿಂದಶೆಟ್ಟಿ, ಉಪಾಧ್ಯಕ್ಷ ರಾಜು, ನಿರ್ದೇಶಕ ಬಸವರಾಜು ಉಪಸ್ಥಿತರಿದ್ದರು.