
ಮೈಸೂರು; ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ, ಜೂನ್ 4 ರಂದು ಮೈಸೂರಿನಲ್ಲಿ “ನಾಲ್ಮಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು” ಕೃತಿ ಬಿಡುಗಡೆ ಮಾಡಲಾಗುವುದು ಎಂದು ಪರಿಷತ್‌ನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನಾಲ್ಮಡಿ ಅವರ ಕುರಿತು ‘ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು’ ಎಂಬ ಪುಸ್ತಕ ಪ್ರಕಟಿಸಿ, ಬೆಂಗಳೂರಿನಲ್ಲಿ ಜನಾರ್ಪಣೆ ಮಾಡಿ ಅವರಿಗೆ ಕೃತಜ್ಞತೆ ಮತ್ತು ಗೌರವಗಳನ್ನು ಸಲ್ಲಿಸಲಾಗಿತ್ತು. ಮುಂದುವರೆದು ಇದೀಗ ಪರಿಷ್ಕöÈತ ಆವೃತ್ತಿಯನ್ನು ಹೊಸ ರೂಪದಲ್ಲಿ “ನಾಲ್ಮಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು” ಕೃತಿಯನ್ನು ಬಿಡುಗಡೆಗೆ ಸಿದ್ಧಪಡಿಸಲಾಗಿದೆ. ಅಲ್ಲದೆ ಅವರ ಜನ್ಮದಿನವಾದ ಜೂನ್ ನಾಲ್ಕರಂದು ಮೈಸೂರಿನಲ್ಲಿ ಜನಾರ್ಪಣೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಪುಸ್ತಕದಲ್ಲಿನ ಸಂಶೋಧನಾತ್ಮಕ ವಿಚಾರಗಳು, ನಾಲ್ವಡಿ ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾಗಿ ಪ್ರಸ್ತುತ ಪ್ರಚಲಿತವಿರುವ ಪ್ರಜಾಪ್ರಭುತ್ವದ ಆಡಳಿತಕ್ಕೆ ಮಾರ್ಗದರ್ಶನ ನೀಡುವಂತಿವೆ. ಈ ಪುಸ್ತಕವು ಕನ್ನಡ ಸಾಹಿತ್ಯದ, ಇತಿಹಾಸದ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತ ಓದುಗರಿಗೆ ಒಂದು ಅತ್ಯುತ್ತಮ ಆಕರವಾಗಲಿದೆಯೆಂದೂ ನಂಬಿದ್ದೇವೆ. ಇಂತಹ ಅಮೂಲ್ಯ ಪುಸ್ತಕವನ್ನು ಪ್ರಕಟಿಸಲು. ನಮ್ಮ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅವಕಾಶ ಕಲ್ಪಿಸಿಕೊಟ್ಟ ನಾಡಿನ ಹಿರಿಯ ಇತಿಹಾಸಕಾರರಾದ ಪ್ರೊ ಎಸ್. ಚಂದ್ರಶೇಖರ್ ಅವರಿಗೆ ನಾವು ಆಭಾರಿಯಾಗಿದ್ದೇವೆ ಎಂದರು.
ಈ ಕೃತಿಯಲ್ಲಿ ಸಾಮಾಜಿಕ ನ್ಯಾಯ, ಸೌಹಾರ್ದತೆ ಮತ್ತು ಪ್ರಜೆಗಳ ಹಿತರಕ್ಷಣೆಗಳು ನಾಲ್ವಡಿ ಅವರ ಮುಖ್ಯ ಧೈಯವಾಗಿದ್ದವು ಎಂಬುದನ್ನು ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ. ಇಂತಹ ಮಾರ್ಗದರ್ಶಿತ್ವದ ಇತಿಹಾಸವನ್ನು ತಿಳಿಯುವುದು ಎಲ್ಲರ ಕರ್ತವ್ಯವಾಗಿದೆ. ಆ ಕಾರಣಕ್ಕಾಗಿಯೇ ನಮ್ಮ ಈ ಪ್ರಯತ್ನವಾಗಿದೆ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜೂನ್ 4 ಗುರುವಾರ ಬೆಳಗ್ಗೆ 11 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಆವರಣದಲ್ಲಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ‘ಬಿ.ಎಂ.ಶ್ರೀ ಸಭಾಂಗಣದಲ್ಲಿ ‘ ಕೃತಿ ಬಿಡುಗಡೆಯಾಗಲಿದೆ.
ಹಿರಿಯ ಸಾಹಿತಿ ನಾಡೋಜ ಡಾ. ಬರುಗೂರು ರಾಮಚಂದ್ರಪ್ಪ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಕೃತಿಯನ್ನು ಕುರಿತು ಹಿರಿಯ ವಿಮರ್ಶಕ ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಂ. ನಂಜಯ್ಯ ಹೊಂಗನೂರು ಅವರು ವಹಿಸಲಿದ್ದಾರೆ. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ವಾಣಿಜ್ಯ ತೆರಿಗೆ ಇಲಾಖೆಯ, ಬೆಂಗಳೂರಿನ ಜಂಟಿ ಆಯುಕ್ತರು ಮತ್ತು ಕಲಾವಿದರಾದ ಡಾ.ಸಂಗಮೇಶ ಉಪಾಸೆ ಭಾಗವಹಿಸಲಿದ್ದಾರೆ. ಕೃತಿಯ ಲೇಖಕ ಪ್ರೊ. ಎಸ್. ಚಂದ್ರಶೇಖರ್ ಉಪಸ್ಥಿತರಿರಲಿದ್ದು, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಲಿರುವರು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡ ಪ್ರೊ. ಎಂ. ನಂಜಯ್ಯ ಹೊಂಗನೂರು ಅವರನ್ನು ಸನ್ಮಾನಿಸಲಾಯಿತು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಲತಾ ಮೋಹನ್ ಉಪಸ್ಥಿತರಿದ್ದರು.