3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಭಿವೃದ್ಧಿಯಲ್ಲ, ಸಮೃದ್ಧಿ ಬೇಕು; ಪ್ರೊ.ಕೃಷ್ಣೇಗೌಡ ಪ್ರತಿಪಾದನೆ

ಎಚ್.ವಿ.ರಾಜೀವ್‌ ಸ್ನೇಹ ಬಳಗದಿಂದ ಲಕ್ಷವೃಕ್ಷ ಅಭಿಯಾನ

ಮೈಸೂರು: ಸರ್ಕಾರಗಳು ಹೇಳುತ್ತಿರುವ ಅಭಿವೃದ್ಧಿ ಬಗ್ಗೆ ಅಸಹ್ಯ ಬಂದು ಹೋಗಿದೆ. ನಮಗೆ ಬೇಕಿರುವುದು ಅಭಿವೃದ್ಧಿಯಲ್ಲ, ಸಮೃದ್ಧಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಕೃಷ್ಣೇಗೌಡ ಹೇಳಿದರು.
ಎಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಮೈಸೂರು- ಊಟಿ ರಸ್ತೆಯ ಬಂಡೀಪಾಳ್ಯ ಸಮೀಪದ ಹಸಿರು ಮೈಸೂರು ನರ್ಸರಿಯಲ್ಲಿ ಗುರುವಾರ ಆಯೋಜಿಸಿದ್ದ ʼಹಸಿರು ಮೈಸೂರು- ಲಕ್ಷವೃಕ್ಷ ಅಭಿಯಾನʼ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸರ್ಕಾರಗಳು ಅಥವಾ ವ್ಯವಸ್ಥೆ ಅಭಿವೃದ್ಧಿ ಹೆಸರಲ್ಲಿ ಸೃಷ್ಟಿಸುತ್ತಿರುವ ಅದ್ವಾನಗಳನ್ನು ನೋಡಿದರೆ ಅಸಹ್ಯ ಆಗುತ್ತಿದೆ. ಲಂಡನ್‌ ನಗರದಲ್ಲಿ ಒಂದೇ ಒಂದು ಮೇಲ್ಸೇತುವೆ ಇಲ್ಲ. ಆದರೆ ನಮ್ಮಲ್ಲಿ ವಾಹನ ದಟ್ಟಣೆ ಆಗುವ ಜಾಗದಲ್ಲೆಲ್ಲ ಮೇಲ್ಸೇತುವೆ ಕಟ್ಟುತ್ತಿದ್ದೇವೆ. ಇದರಿಂದ ಇನ್ನಷ್ಟು ಕಾರುಗಳು ರಸ್ತೆಗೆ ಬರುತ್ತಿವೆ. ಸಮೃದ್ಧವಾದ ಪರಿಸರವನ್ನು ಅಭಿವೃದ್ಧಿ ಹೆಸರಲ್ಲಿ ಹಾಳು ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಅತಿಯಾಸೆಯಿಂದ ಹಾನಿ: ಪರಿಸರಕ್ಕೆ ನಮ್ಮ ಅಗತ್ಯಗಳನ್ನು ಪೂರೈಸುವ ಶಕ್ತಿ ಇದೆ, ದುರಾಸೆಗಳನ್ನು ಅಲ್ಲ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಮನುಷ್ಯನ ಅತಿಯಾಸೆ, ಕೊಳ್ಳುಬಾಕುತನಗಳಿಗೆ ಮಿತಿಯೇ ಇಲ್ಲ. ಇದರಿಂದಾಗಿ ಪರಿಸರದ ಮೇಲೆ ಉಂಟಾಗಿರುವ ದುಷ್ಪರಿಣಾಮಗಳನ್ನು ಅಂದಾಜು ಮಾಡುವುದಕ್ಕೂ ಸಾಧ್ಯವಿಲ್ಲ. ಪರಿಸರದ ಬಗ್ಗೆ ಮನುಷ್ಯ ಇನ್ನಷ್ಟು ಸೂಕ್ಷ್ಮ ಆಗಬೇಕಿದೆ ಎಂದು ಸೂಚ್ಯವಾಗಿ ಹೇಳಿದರು.
ವಿದೇಶಗಳಲ್ಲಿ ಸಾಹೇಬ- ಜವಾನ ಒಂದೇ ಬಸ್‌ನಲ್ಲಿ ಓಡಾಡುತ್ತಾರೆ. ನಮ್ಮಲ್ಲಿ ಕಾರು ಘನತೆಯ ಸಂಕೇತವಾಗಿದೆ. ಯುವಕ- ಯುವತಿಯರಂತೂ ಒಂದು ಕಾಫಿ ಕುಡಿಯಲು ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಬರುವ ಅಭ್ಯಾಸ ಮಾಡಿಕೊಂಡಿದ್ದಾರೆ. ಅದಕ್ಕೆ ಬೇಕಾಗುವ ಇಂಧನ, ಉಂಟಾಗುವ ಪರಿಸರ ಮಾಲಿನ್ಯ ಯಾವುದರ ಬಗ್ಗೆಯೂ ಅವರಿಗೆ ಅಂದಾಜೂ ಇಲ್ಲ. ಪೋಷಕರು ಅವರಿಗೆ ಸೈಕಲ್‌ ಹೊಡಿ ಮೀನಖಂಡ ಗಟ್ಟಿಯಾಗುತ್ತದೆ ಎಂದು ಹೇಳಿಕೊಡಬೇಕು. ಅವರಿಂದಲೇ ಗಿಡ ನೆಡಿಸಿ ಪರಿಸರ ಉಳಿಸಿದ್ದೇವೆ ಎಂದುಕೊಳ್ಳಬಾರದು ಎಂದು ಸಲಹೆ ನೀಡಿದರು.
ವೇಗ, ಬೆಳಕು, ಶಬ್ಧದ ಹುಚ್ಚು: ಮನುಷ್ಯನಿಗೆ ಇತ್ತೀಚೆಗೆ ವೇಗ, ಬೆಳಕು ಹಾಗೂ ಶಬ್ಧದ ಹುಚ್ಚು ಹೆಚ್ಚಾಗಿದೆ. ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಹಸಿರು ದೀಪ ಹೊತ್ತುವುದಕ್ಕೂ ಕಾಯುವುದಿಲ್ಲ, ಹಳದಿ ಸಿಗ್ನಲ್‌ನಲ್ಲೇ ವಾಹನ ಚಲಾಯಿಸಿ 2 ಸೆಕೆಂಡ್ ಉಳಿಸಿ ಸಾಧಿಸಿದ್ದು ಏನು ? ಹುಟ್ಟು, ಸಾವು, ಹಬ್ಬ, ಸಂಭ್ರಮ ಎಲ್ಲದ್ದಕ್ಕೂ ಗದ್ದಲ ಮಾಡುವ ಅಗತ್ಯವಿದೆಯೇ ? ಬೆಳಕಿಗಿಂತಲೂ ಕತ್ತಲೆಯಲ್ಲಿ ಆಗುವ ಸೃಷ್ಟಿಕ್ರಿಯೆ ದೊಡ್ಡದು. ಇದೆಲ್ಲವನ್ನೂ ನಾವು ಅರ್ಥ ಮಾಡಿಕೊಳ್ಳುತ್ತಿಲ್ಲ. ಬಲ್ಬ್‌ವೊಂದು ಹೊರಸೂಸುವ ಬೆಳಕನ್ನು ಅಳೆಯುತ್ತೇವೆ, ಅದೇ ಬಲ್ಬ್ ಉಂಟುಮಾಡುವ ಶಾಖವನ್ನು ನಾವು ಅಳೆಯುತ್ತಿಲ್ಲ ಎಂದು ಸೂಚ್ಯವಾಗಿ ಹೇಳಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್‌ ಸಂಪಾದಕ ಅಜಿತ್‌ ಹನುಮಕ್ಕನವರ್‌ ಮಾತನಾಡಿ, ಪರಿಸರವನ್ನು ಪರಿಸರದ ಪಾಡಿಗೆ ಬಿಡುವುದೇ ನಿಜವಾದ ಸಂರಕ್ಷಣೆ. ಮನುಷ್ಯ ಎಲ್ಲಿಗೆ ಕಾಲಿಟ್ಟಿಲ್ಲವೋ ಅಲ್ಲಿಯೇ ನಿಜವಾದ ಪರಿಸರ ಉಳಿದಿದೆ. ಹಾಲು ಮತ್ತು ಡೈಪರ್ ಬಳಕೆ ಆಧಾರದ ಮೇಲೆ ಪ್ರತಿ ಎರಡೂವರೆ ವರ್ಷದ ಮಗು 9 ಮರ ಕಡಿದಂತೆ ಆಗಿದೆ ಎಂದು ಅಧ್ಯಯನವೊಂದು ಹೇಳಿದೆ ಎಂದರು.
ಎಲ್ಲವನ್ನೂ ಅಳವಡಿಸಿಕೊಳ್ಳುವ ಮತ್ತು ಪರಸ್ಪರ ಸಹಕಾರ ನೀಡುವ ಗುಣದಿಂದ ಮನುಷ್ಯ ಬೇರೆಲ್ಲ ಜೀವರಾಶಿಗಳಿಗೂ ಭಿನ್ನವಾಗಿದ್ದಾನೆ. ಇಷ್ಟೆಲ್ಲ ಅಂತರಿಕ್ಷ ಅಧ್ಯಯನದ ನಂತರವೂ ಮನುಷ್ಯ ಬದುಕಬಲ್ಲ ಮತ್ತೊಂದು ಗ್ರಹ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇರುವ ಒಂದೇ ಭೂಮಿಯನ್ನು ಜೋಪಾನವಾಗಿ ಉಳಿಸಿಕೊಳ್ಳದೇ ಇದ್ದರೆ ಮನುಷ್ಯನಿಗೆ ಉಳಿವಾಗವಿಲ್ಲ. ಮರ ನೆಡುವ ಅಭಿಯಾನದಂತಹ ಕಾರ್ಯಕ್ರಮಗಳು ಬರಲಿರುವ ಪ್ರಳಯವನ್ನು ಮತ್ತಷ್ಟು ದಿನ ಮುಂದೂಡಬಹುದಷ್ಟೆ ಎಂದರು.
ಇದೇ ವೇಳೆ ಮೈಸೂರು ಮಹಾನಗರ ಪಾಲಿಕೆ ಐದು ಸಾವಿರ ಗಿಡಗಳನ್ನು ವಿತರಿಸಲಾಯಿತು. ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೂ ಸಾಂಕೇತಿಕವಾಗಿ ಗಿಡಗಳನ್ನು ವಿತರಣೆ ಮಾಡಲಾಯಿತು.
ಚಾಮರಾಜನಗರ ಮರಿಯಾಲದ ಶ್ರಿ ಮುರುಘರಾಜೇಂದ್ರ ಮಹಾ ಸಂಸ್ಥಾನ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಸಾಹಿತಿ ಶಿವಪ್ಪ, ನಿವೃತ್ತ ಐಎಫ್ ಎಸ್ ಅಧಿಕಾರಿ ಟಿ.ಬಾಲಚಂದ್ರ, ಹಸಿರು ಮೈಸೂರು ಮತ್ತು ಲಕ್ಷ ವೃಕ್ಷ ರೂವಾರಿ ಎಚ್.ವಿ.ರಾಜೀವ್, ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಮತ್ತಿತರರಿದ್ದರು.

ಮೈಸೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ಸುರಕ್ಷಿತ ನಗರವಾಗಿ ರೂಪಿಸುವ ಉದ್ದೇಶದಿಂದ 2018ರಲ್ಲಿ ಪ್ರಾರಂಭವಾದ ಲಕ್ಷವೃಕ್ಷ ಆಂದೋಲನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ನಗರದ ನಿವಾಸಿಗಳ ಉಸಿರಾಟಕ್ಕೆ ಯೋಗ್ಯ ಗಾಳಿ ದೊರಕಿಸುವುದು ಅಭಿಯಾನದ ಉದ್ದೇಶವಾಗಿದ್ದು, ಇದರಲ್ಲಿ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲ.
ಎಚ್.ವಿ.ರಾಜೀವ್, ಅಧ್ಯಕ್ಷ, ಎಚ್.ವಿ.ರಾಜೀವ್‌ ಸ್ನೇಹ ಬಳಗ