3Kaala News

ಸುಭಾಷಿತ 

ಯಾವುದಕ್ಕಾಗಿ ಚಿಂತೆ ಯಾವುದಕ್ಕಾಗಿ ದುಃಖ ಪಡುತ್ತಿದ್ದಿ , ನೆನ್ನೆ ಇದ್ದ ಖುಷಿ ಇವತ್ತು ಇಲ್ಲ ಅಂದಮೇಲೆ ಇವತ್ತು ಇರೋದು ನಾಳೆ ಇರುತ್ತಾ? ಈ ಜಗತ್ತಿನ ಸೃಷ್ಟಿಯಲ್ಲಿ ಯಾವುದೂ ಕೂಡ ಶಾಶ್ವತ ಅಲ್ಲ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಿರ್ದಿಷ್ಟ ಗುರಿ, ದೃಢ ಸಂಕಲ್ಪವಿದ್ದರೆ ಮಾತ್ರ ಯಶಸ್ಸು ಸಾಧ್ಯ


ಮೈಸೂರು; ನಿರ್ದಿಷ್ಟ ಗುರಿ, ದೃಢ ಸಂಕಲ್ಪವಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಮೈಸೂರು ಜಿಲ್ಲೆ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ ಟಿ ರಮ್ಯ ಹೇಳಿದರು.
ಬುಧವಾರ ಮೈಸೂರಿನ ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಹೇಳಿದ ಅವರು ಯಾವ ಕೋರ್ಸ್ ಆಯ್ಕೆ ಮಾಡಿದರೆ ಉದ್ಯೋಗಗಳನ್ನು ಪಡೆಯಬಹುದು ಎಂಬ ಪ್ರಶ್ನೆಗಳಿಗೆ ಗುರುಹಿರಿಯರ ಮಾರ್ಗದರ್ಶನ, ಪೋಷಕರ ಬೆಂಬಲ ಬಹಳ ಮುಖ್ಯ ಎಂಬುದನ್ನು ಮನವರಿಕೆ ಮಾಡಿದರು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಕಾಲ ಹರಣ ಮಾಡದೆ ಅದನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮಾಹಿತಿಗಾಗಿ ಸದ್ಭಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕÀ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಬದುಕು ಸುಂದರವಾಗುವಲ್ಲಿ ಶೈಕ್ಷಣಿಕ ಹಂತದಲ್ಲಿ ನಾವು ಪಡೆಯುವ ಅತ್ಯುನ್ನತ ಸ್ಥಾನ ಕೂಡ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆಯುವುದು ಸಾಮಾನ್ಯ. ಆದರೆ ಇಂದು ಮಾನವಿಕ ಜಗತ್ತನ್ನು ನಿರ್ಮಿಸುವ ಕಲಾ ವಿಭಾಗದಲ್ಲಿ ಬಹಳ ಸಂಖ್ಯೆಯಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವುದು ವಿಶೇಷವಾಗಿದೆ ಎಂದರು.
ಯಶಸ್ಸು ಗಳಿಸಲು ನಮಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ಪೂರ್ತಿ, ಪ್ರೇರಣೆ ನೀಡಿದವರನ್ನು ನೆನೆದುಕೊಳ್ಳುವುದು ಬಹಳ ಮುಖ್ಯ. ಆಮೆ ಮತ್ತು ಮೊಲದ ಕಥೆಯನ್ನು ಹೇಳುವ ಮೂಲಕ ನಮ್ಮ ಗುರಿ ಸಾಧನೆಯಾಗುವವರೆಗೂ ಮೈಮರೆಯಬಾರದು ಎಂಬುದನ್ನು ಅರ್ಥೈಸಿದರು. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಭೌದ್ಧಿಕ ಸಾಮರ್ಥ್ಯ ಹೊಂದಿ ಸಮಾಜಮುಖಿಯಾಗುವ ಮೂಲಕ ಸಾರ್ಥಕ ಜೀವನ ಮಾಡಬೇಕೆಂದು ಕಿವಿಮಾತು ಹೇಳಿದರು.
ಕಲಾ ವಿಭಾಗದಲ್ಲಿ 600 ಕ್ಕೆ 591 ಅಂಕಗಳಿಸಿ ರಾಜ್ಯಕ್ಕೆ 8ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುವ ಕು. ಬಿ ಎಸ್ ಮಾನ್ಯಶ್ರೀರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿ ಪಡೆದ 107 ವಿದ್ಯಾರ್ಥಿನಿಯರಿಗೆ ಸ್ಮರಣಿಕೆಯನ್ನು ನೀಡುವುದರ ಮೂಲಕ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಟಿ ಗುರುಪಾದಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ರೇಚಣ್ಣನವರು ಹಾಗೂ ಪ್ರತಿಭಾ ಪುರಸ್ಕಾರ ಸಮಿತಿ ಸಂಚಾಲಕಿ ಮಂಜುಳ.ಎಸ್ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕೃತರಾದ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿನಿಯರಿಗೆ ವಿಶೇಷವಾದ ಗೌರವ ಸಿಗುತ್ತದೆ. ಶಿಕ್ಷಣದ ಜೊತೆಗೆ ಬದುಕಿನ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತಹ ಅವಕಾಶಗಳನ್ನು ಸಂಸ್ಥೆಯು ಕಲ್ಪಸಿಕೊಟ್ಟಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕು. ದೇವಕಿ ಬಿ. ಕೆ. ಪ್ರಾರ್ಥಿಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀ ಎಂ ಎಸ್ ನಟರಾಜುರವರು ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಮಂಜುಳ ಎಸ್ ವಂದಿಸಿದರು. ರಾಜ್ಯಶಾಸ್ತç ವಿಭಾಗದ ಉಪನ್ಯಾಸಕರಾದ ಶ್ರೀ ಟಿ ಎಸ್ ಗಿರೀಶ್ ರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಹಾಗೂ ಪೋಷಕರು ಭಾಗವಹಿಸಿದ್ದರು.