
ಮೈಸೂರು; ಜನ ವಿಶ್ವಾಸ (ತಿದ್ದುಪಡಿ ನಿಬಂಧನೆಗಳು) ಕಾಯ್ದೆ, 2026 ಹಾಗೂ ಅದರ ಅನ್ವಯ ರೈಲ್ವೆ ಕಾಯ್ದೆ, 1989 ಮತ್ತು ಕಲ್ಕತ್ತಾ ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ತಾತ್ಕಾಲಿಕ ನಿಬಂಧನೆಗಳ ಕಾಯ್ದೆ, 1985 ರಲ್ಲಿ ಮಾಡಲಾದ ತಿದ್ದುಪಡಿಗಳ ಕುರಿತು ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಇಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗಗಳ ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದರು.
ಭಾರತದ ರಾಷ್ಟçಪತಿಗಳ ಅನುಮೋದನೆ ಪಡೆದಿರುವ ಹಾಗೂ ಭಾರತ ಸರ್ಕಾರದ ಅಧಿಕೃತ ಗಜೆಟ್ನಲ್ಲಿ ಪ್ರಕಟವಾಗಿರುವ ಜನ ವಿಶ್ವಾಸ (ತಿದ್ದುಪಡಿ ನಿಬಂಧನೆಗಳು) ಕಾಯ್ದೆ, 2026ರ ಮುಖ್ಯ ಉದ್ದೇಶವು ಸಣ್ಣ ಪ್ರಮಾಣದ ನಿಯಂತ್ರಣಾತ್ಮಕ ಅಪರಾಧಗಳನ್ನು ಅಪರಾಧೀಕರಣದಿಂದ ಹೊರಗಿಡುವುದು ಮತ್ತು ಕೆಲವು ಸಂದರ್ಭಗಳಲ್ಲಿ ಜೈಲು ಶಿಕ್ಷೆಯ ಬದಲಿಗೆ ನಾಗರಿಕ ಅಥವಾ ಆಡಳಿತಾತ್ಮಕ ದಂಡಗಳನ್ನು ವಿಧಿಸುವ ವ್ಯವಸ್ಥೆಯನ್ನು ಜಾರಿಗೆ ತರುವುದು. ಈ ಕಾಯ್ದೆಯು ವಿಶ್ವಾಸಾಧಾರಿತ ಆಡಳಿತವನ್ನು ಉತ್ತೇಜಿಸುವುದರ ಜೊತೆಗೆ ಸಾರ್ವಜನಿಕರು ಮತ್ತು ಉದ್ಯಮಗಳಿಗೆ ನಿಯಮಾನುಸರಣೆ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶ ಹೊಂದಿದೆ.
ನೈರುತ್ಯ ರೈಲ್ವೆ, ಹುಬ್ಬಳ್ಳಿಯ ಇನ್ಸ್ಪೆಕ್ಟರ್ ಜನರಲ್ ಹಾಗೂ ಪ್ರಧಾನ ಮುಖ್ಯ ಭದ್ರತಾ ಆಯುಕ್ತರು ನೀಡಿದ ನಿರ್ದೇಶನದಂತೆ, ಆರ್ಪಿಎಫ್ನ ಎಲ್ಲಾ ಹಂತದ ಸಿಬ್ಬಂದಿಗೆ ತಿದ್ದುಪಡಿ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ 34 ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದು, ಹುಬ್ಬಳ್ಳಿ ವಿಭಾಗದ ಆರ್ಪಿಎಫ್ ಸಿಬ್ಬಂದಿಯೂ ಸಹ ಉಪಸ್ಥಿತರಿದ್ದರು. ಎರಡೂ ವಿಭಾಗಗಳ ಸಿಬ್ಬಂದಿಯ ಭಾಗವಹಿಸುವಿಕೆಯಿಂದ ಹೊಸ ಕಾನೂನು ತಿದ್ದುಪಡಿಗಳ ಕುರಿತು ವ್ಯಾಪಕ ಅರಿವು ಮೂಡಿಸಲು ನೆರವಾಯಿತು.
ಅರಸೀಕೆರೆಯ ಹಿರಿಯ ಸಾರ್ವಜನಿಕ ಪ್ರಾಸಿಕ್ಯೂಟರ್ ಆದ ಆರ್. ಹನುಮಂತಪ್ಪ ಅವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾಯ್ದೆಯ ಪ್ರಮುಖ ತಿದ್ದುಪಡಿಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ನಿರ್ದಿಷ್ಟ ಅಪರಾಧಗಳಲ್ಲಿ ಕ್ರಿಮಿನಲ್ ಪ್ರಕರಣಗಳ ಬದಲಿಗೆ ಆಡಳಿತಾತ್ಮಕ ದಂಡ ವಿಧಿಸುವ ವ್ಯವಸ್ಥೆ, ದಂಡ ಪಾವತಿಯಾಗದ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕಾನೂನು ಕ್ರಮಗಳು ಹಾಗೂ ಜಾರಿಯಲ್ಲಿನ ಪ್ರಾಯೋಗಿಕ ಅಂಶಗಳ ಕುರಿತು ಅವರು ವಿವರಿಸಿದರು. ಜೊತೆಗೆ, ಸಿಬ್ಬಂದಿಯಿAದ ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡಿ ಸಂದೇಹಗಳನ್ನು ನಿವಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ವಿಭಾಗದ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಸ್ಯಾಮ್ ಪ್ರಶಾಂತ್ ಜೆ.ಆರ್, ಇಂತಹ ಸಾಮರ್ಥ್ಯ ವೃದ್ಧಿ ಹಾಗೂ ಜಾಗೃತಿ ಕಾರ್ಯಕ್ರಮಗಳು ಆರ್ಪಿಎಫ್ ಸಿಬ್ಬಂದಿಯನ್ನು ನವೀಕೃತ ಕಾನೂನು ಮತ್ತು ನಿಯಮಗಳೊಂದಿಗೆ ಹೊಂದಾಣಿಕೆಗೊಳಿಸಲು ಅತ್ಯಂತ ಅಗತ್ಯವೆಂದು ತಿಳಿಸಿದರು. ಪ್ರಯಾಣಿಕರ ಸುರಕ್ಷತೆ ಹಾಗೂ ರೈಲ್ವೆ ಆಸ್ತಿಯ ರಕ್ಷಣೆಯೊಂದಿಗೆ ನ್ಯಾಯಸಮ್ಮತ, ಪಾರದರ್ಶಕ ಮತ್ತು ಪರಿಣಾಮಕಾರಿ ಕಾನೂನು ಜಾರಿಯನ್ನು ಖಚಿತಪಡಿಸಲು ಆರ್ಪಿಎಫ್ ಬದ್ಧವಾಗಿದೆ ಎಂದು ಹೇಳಿದರು. ಮುಂಚೂಣಿ ಸಿಬ್ಬಂದಿಯನ್ನು ಕಾನೂನು ಹಾಗೂ ಕಾರ್ಯವಿಧಾನಗಳಲ್ಲಿನ ಬದಲಾವಣೆಗಳ ಕುರಿತು ನಿರಂತರವಾಗಿ ನವೀಕರಿಸಲು ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಮುಂದೆಯೂ ಆಯೋಜಿಸಲಾಗುವುದು ಎಂದು ತಿಳಿಸಿದರು.