
ಮೈಸೂರು; ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ವತಿಯಿಂದ ಹಕ್ಕಿ ಮತ್ತು ಅವಳು’ ಎಂಬ ವಿಶಿಷ್ಟ ಏಕವ್ಯಕ್ತಿ ಕಾವ್ಯಾಭಿನಯ ರಂಗಪ್ರಯೋಗವು ಜೂನ್ 27 ರ ಶನಿವಾರ ಸಂಜೆ 6 ಗಂಟೆಗೆ ನಗರದ ಹಾರ್ಡಿ್ವಕ್ ಶಾಲಾ ಆವರಣದಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.
ಖ್ಯಾತ ರಂಗಕರ್ಮಿ ಡಾ. ಶ್ರೀಪಾದ ಭಟ್ ಅವರ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ರಂಗಪ್ರಯೋಗದಲ್ಲಿ ಕಾವ್ಯ ಹಂದೆ ಅವರು ಅಭಿನಯಿಸಲಿದ್ದಾರೆ. ಕನ್ನಡದಲ್ಲಿನ ಹಾಗೂ ಕನ್ನಡಕ್ಕೆ ಅನುವಾದಗೊಂಡಿರುವ ಆಯ್ದ ಕವನಗಳು, ಕಥೆಗಳು ಮತ್ತು ಪ್ರಬಂಧಗಳನ್ನು ಆಧರಿಸಿಕೊಂಡು ಈ ಕಾವ್ಯಾಭಿನಯವನ್ನು ರೂಪಿಸಲಾಗಿದೆ.
ಹೆಣ್ಣಿನ ಅಸ್ತಿತ್ವ, ಸ್ವಾತಂತ್ರ÷್ಯ, ಬಿಡುಗಡೆಯ ಕನಸು ಹಾಗೂ ಬದುಕಿನ ಸಂಕೀರ್ಣ ಬಂಧನಗಳನ್ನು ಕಲಾತ್ಮಕವಾಗಿ ಅನಾವರಣಗೊಳಿಸುವ ಈ ರಂಗಪ್ರಯೋಗವು ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಲಿದೆ. ದೇಹ ಮತ್ತು ದೇಶಗಳ ಗಡಿಗಳಲ್ಲಿ ಬಂಧಿತಳಾದ `ಅವಳು’ ತನ್ನ ಸ್ವಾತಂತ್ರ÷್ಯದ ಹುಡುಕಾಟ ನಡೆಸುವ ಪಯಣವನ್ನು ಈ ಪ್ರದರ್ಶನ ಚಿತ್ರಿಸುತ್ತದೆ. ನೋವಿನ ಆಚೆಗಿನ ಅರಿವು, ವಿಮೋಚನೆ ಮತ್ತು ಆತ್ಮಶೋಧನೆಯ ವಿಚಾರಗಳನ್ನು ಕಾವ್ಯಾತ್ಮಕವಾಗಿ ಅಭಿವ್ಯಕ್ತಿಸುವ ಪ್ರಯತ್ನ ಇದಾಗಿದೆ.
ಬಂಧನಗಳ ಮೂಲವನ್ನು ಅನ್ವೇಷಿಸುತ್ತಾ, ನೆಲದಗಲ, ಜಗದಗಲ ಮತ್ತು ಮುಗಿಲಗಲ ಹರವಿಕೊಂಡಿರುವ ಬಿಡುಗಡೆಯ ಧ್ವನಿಗಳನ್ನು ಒಂದೆಡೆ ಸೇರಿಸಿರುವ ಈ ಕಾವ್ಯಪ್ರಯೋಗವು ಸಮಾಜದಲ್ಲಿ ಸಣ್ಣ ಬದಲಾವಣೆಗಳೂ ದೊಡ್ಡ ಪರಿಣಾಮಗಳನ್ನು ಉಂಟುಮಾಡಬಲ್ಲವು ಎಂಬ ಆಶಯವನ್ನು ಒಳಗೊಂಡಿದೆ.
ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.ನಂ 96868 92255ನ್ನು ಸಂಪರ್ಕಿಸುವ0ತೆ
ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಪ್ರಕಟಣೆಯಲ್ಲಿ ಕೋರಿದೆ.
