Skip to main content

3Kaala News

ಸುಭಾಷಿತ 

ಬದುಕೆಂಬುದು ಚೈನಿನ ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚಾಮರಾಜನಗರದಲ್ಲೂ ರಂಗಾಯಣ ಸ್ಥಾಪನೆಯಾಗಬೇಕು: ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್


ಚಾಮರಾಜನಗರ
: ರಾಜ್ಯದ ವಿವಿಧ ಕಡೆ ರಂಗಾಯಣ ಇರುವಂತೆಯೇ ಜಾನಪದ ಕಲೆಗಳ ತವರೂರು ಎನಿಸಿದ ಚಾ.ನಗರದಲ್ಲೂ ರಂಗಾಯಣ ಸ್ಥಾಪಿಸಬೇಕು ಎಂದು ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್‍ ಮುನ್ನಾ ಒತ್ತಾಯಿಸಿದರು.
ನಗರದ ಡಾ. ರಾಜಕುಮಾರ್‍ ರಂಗಮಂದಿರದಲ್ಲಿ, ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗವಾಹಿನಿ, ರಾಜ್ಯ ರೈತ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೊಳುವಾರು ಮಹಮ್ಮದ್ ಕುಂಇ್ಞು ಅವರ ಕಾದಂಬರಿ ಆಧಾರಿತ ಸ್ವಾತಂತ್ರ್ಯದ ಓಟ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗಡಿ ಜಿಲ್ಲೆ ಚಾಮರಾಜನಗರ ಸಾಂಸ್ಕೃತಿಕವಾಗಿ, ಜನಪದೀಯ ದೃಷ್ಟಿಯಿಂದ ಶ್ರೀಮಂತ ಜಿಲ್ಲೆ. ಇದು ವರನಟ ಡಾ. ರಾಜಕುಮಾರ್‍ ಅವರ ತವರು ಜಿಲ್ಲೆ. ಇಲ್ಲಿ ರಂಗ ಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕಾಗಿದೆ. ಈ ದೃಷ್ಟಿಯಿಂದ ಚಾಮರಾಜನಗರದಲ್ಲೂ ರಂಗಾಯಣ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.
ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಮಾತನಾಡಿ, ಸ್ವಾತಂತ್ರ್ಯದ ಓಟ ಅತ್ಯುತ್ತಮ ನಾಟಕವಾಗಿದ್ದು, ಅದನ್ನು ಚಾಮರಾಜನಗರದಲ್ಲೂ ಪ್ರದರ್ಶಿಸುವ ಮೂಲಕ ನಮ್ಮ ರಂಗಾಸಕ್ತರಿಗೂ ನಾಟಕ ತಲುಪಿಸಬೇಕೆಂಬ ಉದ್ದೇಶ ನಮ್ಮದಾಗಿತ್ತು. ಅದಕ್ಕಾಗಿ ನಗರದಲ್ಲಿ ಈ ನಾಟಕ ಆಯೋಜಿಸಲಾಗಿದೆ. ಇಂಥ ಒಳ್ಳೆಯ ನಾಟಕವನ್ನು ನೀಡಿದ ಶಿವಮೊಗ್ಗ ರಂಗಾಯಣಕ್ಕೆ, ನಿರ್ದೇಶಕ ನಟರಾಜ್ ಹೊನ್ನವಳ್ಳಿ ಅವರಿಗೆ ಅಭಿನಂದನೆಗಳು ಎಂದರು.
ರಂಗಕರ್ಮಿ ಕೆ. ವೆಂಕಟರಾಜು, ರೈತ ಮುಖಂಡ ಹೊನ್ನೂರು ಪ್ರಕಾಶ್, ಶಿಕ್ಷಕರ ಸಂಘದ ಸಿ.ಕೆ. ರಾಮಸ್ವಾಮಿ, ಕಲೆ ನಟರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಓಟ:

ಬಳಿಕ ಶಿವಮೊಗ್ಗ ರಂಗಾಯಣ ಕಲಾವಿದರು ಪ್ರಯೋಗಿಸಿದ ಮೂರೂವರೆ ಗಂಟೆ ಅವಧಿಯ ಸ್ವಾತಂತ್ರದ ಓಟ ನಾಟಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಭಾರತ ಮತ್ತು ಪಾಕಿಸ್ತಾನ ವಿಭಜನೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಲಾಹೋರ್ ನಿಂದ ಭಾರತಕ್ಕೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬರುವ ‘ಚಾಂದ್ ಆಲಿ’ ಎದುರಾಗುವ ಹಲವಾರು ತೊಡರುಗಳನ್ನು ಮೆಟ್ಟಿ ಮುತ್ತಾಪ್ಪಾಡಿ ಎಂಬ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳುವ ಕಥನ ನಾಟಕ ವಸ್ತು.
‘ಲಾಹೋರ್’ ನಿಂದ ಆರಂಭವಾಗಿ ಮುತ್ತಾಪ್ಪಾಡಿಗೆ ಬಂದು ಕಡೆಗೆ ವಾಘಾ ಗಡಿವರೆಗೆ ಈ ಕಥನ ಸಾಗುತ್ತದೆ. ನಾಟಕದಲ್ಲಿ ಎಲ್ಲೂ ಕೋಮು ದಳ್ಳುರಿ ಇಲ್ಲ. ಬದಲಿಗೆ ‘ಮುತ್ತಾಪ್ಪಾಡಿ’ ಎಂಬ ಗ್ರಾಮದಲ್ಲಿ ಚಾಂದ್ ಆಲಿ ಬದುಕು ಕಟ್ಟಿಕೊಳ್ಳುವುದರೊಂದಿಗೆ ಸಮಾನತೆ ಹಾಗೂ ಬಹುತ್ವ ಭಾರತದ ಆಶಯವನ್ನು‌ ನಾಟಕ ಎತ್ತಿ ತೋರಿಸುತ್ತದೆ. ಕಬೀರರ ದೋಹೆಗಳನ್ನು ನಾಟಕದಲ್ಲಿ ಬಳಸುವುದರೊಂದಿಗೆ ಸಂಗೀತವನ್ನೇ ಒಂದು ಪಾತ್ರವನ್ನಾಗಿ ನಿರ್ದೇಶಕರು ರೂಪಿಸಿದ್ದಾರೆ. ರಾಘವ ಕಮ್ಮಾರ ಅವರ ಸಂಗೀತ ಸುದೀರ್ಘ ನಾಟಕ ಎನಿಸದಂತೆ ಮಾಡುತ್ತದೆ. ಸಹನಾ ಪಿಂಜರ್ ಅವರ ವಸ್ತ್ರವಿನ್ಯಾಸದಿಂದಾಗಿ ಪಾತ್ರಗಳು 1947ರ ಸನ್ನಿವೇಶವನ್ನು ಒಡಮೂಡಿಸುತ್ತವೆ.
30ಕ್ಕೂ ಹೆಚ್ಚು ಪಾತ್ರಧಾರಿಗಳಿರುವ ಈ ನಾಟಕದಲ್ಲಿ ಬೆಳಕಿನ (ಮಂಜು ನಾರಾಯಣ್) ವಿನ್ಯಾಸದಿಂದಾಗಿ ನೂರಾರು ಪಾತ್ರಧಾರಿಗಳಿರುವಂತೆ ಬಾಸವಾಗುತ್ತದೆ. ಒಟ್ಟಾರೆ ನಾಟಕ ಪ್ರೇಕ್ಷಕರನ್ನು ಭಾವಪರವಶರನ್ನಾಗಿಸಿತು. ನಾಟಕ ಪ್ರದರ್ಶನಗಳು ಬಹಳ ಕಡಿಮೆ ಇರುವ ಚಾಮರಾಜನಗರದಂಥ ಪಟ್ಟಣಕ್ಕೆ ಇಂಥ ನಾಟಕ ಸಾಂಸ್ಕೃತಿಕ ಅವಶ್ಯಕತೆ ಎನಿಸಿತು.