
ಮೈಸೂರು: ನಗರದಲ್ಲಿ ಜುಲೈ 7ರಂದು ನಿತ್ಯೋತ್ಸವ ಕಲ್ಯಾಣಮಂಟಪದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.
ಭಾನುವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಮಾಜಿ ಸಚಿವರಾದ ಬಿ.ಶ್ರೀರಾಮುಲು,ರಮೇಶ್ ಜಾರಕಿಹೊಳಿ, ರಾಜೂಗೌಡ, ಶಾಂತರಾಮ್ ಸಿದ್ದಿ, ಎಸ್ ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಚಿವರು,ಮಾಜಿ ಸಂಸದರು,ಮಾಜಿ ಶಾಸಕರು,ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ಧವಾಗಿ ಸಿಗಬೇಕಿರುವ ಮೀಸಲಾತಿ ಸೌಲಭ್ಯವನ್ನು ದೊರಕಿಸುವಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುವ ಜತೆಗೆ, ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಲು ವಿಫಲವಾಗಿದೆ ಎಂದು ಆರೋಪಿಸಿದರು. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ವರದಿಯಂತೆ ಶೇ.ಮೂರರಿಂದ ಶೇ.7ಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಮುಖ್ಯಮಂತ್ರಿ ಡಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಇಬ್ಬರು ಖಾಸಗಿ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋಗಿದ್ದರಿಂದ, ಈಗ ತಡೆಯಾಜ್ಞೆ ದೊರೆತಿದೆ. ಸರ್ಕಾರದ ಪರ ವಕೀಲರು ನ್ಯಾಯಲಯಕ್ಕೆ ಹಾಜರಾಗಿ, ಸಮರ್ಪಕವಾದ ಮಾಹಿತಿ, ದಾಖಲೆಗಳನ್ನು ಒದಗಿಸಲು ಸಾಧ್ಯವಾಗದೆ ಕೈ ಚೆಲ್ಲಿಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಕೂಡಲೇ ಪರಿಶಿಷ್ಟ ಪಂಗಡ ಸಮಾಜಕ್ಕೆ ನ್ಯಾಯ ಒದಗಿಸಲು ನ್ಯಾಯಲಯದಲ್ಲಿ ಇರುವ ತಡೆಯಾಜ್ಞೆ ತೆರವುಗೊಳಿಸಲು ಕಾನೂನು ಪ್ರಕ್ರಿಯೆ ಚುರುಕುಗೊಳಿಸುವಂತೆ ಆಗ್ರಹಿಸಿದರು.
ರಾಜ್ಯಸರ್ಕಾರ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಸಿಗುವ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದರು.
ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ ಮಾತನಾಡಿ, ಪರಿಶಿಷ್ಟ ಪಂಗಡದ ಬೇಡಿಕೆಯನ್ನು ಮುಂದಿಟ್ಟು ರಾಜ್ಯಾದ್ಯಂತ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ನಗರದಲ್ಲಿ ಪ್ರಾರಂಭ ಮಾಡಿ ರಾಯಚೂರು, ದಾವಣಗೆರೆ, ಹೊಸಪೇಟೆಯ ನಂತರ ಮೈಸೂರು ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ ಎಂದರು.
ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಪಂಗಡಕ್ಕೆ ದೊಡ್ಡ ಅನ್ಯಾಯ ಆಗಿದೆ. ಮೈಸೂರು ಭಾಗದ ನಾಯಕರೇ ಮುಖ್ಯಮಂತ್ರಿ ಅಗಿದ್ದರೂ ನಮಗೆ ನ್ಯಾಯ ಕೊಡಿಸದೆ ಅನ್ಯಾಯ ಮಾಡಿದರು. ರಾಜಕೀಯ ಮೀಸಲಾತಿ ದೊರೆತಿದ್ದರಿಂದ ಹದಿನೈದು ವಿಧಾನಸಭೆ, ಎರಡು ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ದೊರೆತಿದೆ.ಆದರೆ ಈಗ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನಮಗೆ ದೊಡ್ಡ ಅನ್ಯಾಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು. ಸ್ವಾಮೀಜಿ ಅವರ ಹೋರಾಟದ ಫಲವಾಗಿ ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚು ಮಾಡಿದ್ದರೂ ನ್ಯಾಯಲಯದ ಮೂಲಕ ತಡೆಯಾಜ್ಞೆ ತಂದು ಕೈತಪ್ಪಿಸಲಾಗಿದೆ. ರಾಜ್ಯಸರ್ಕಾರ ಕೂಡಲೇ ತಡೆಯಾಜ್ಞೆ ತೆರವುಗೊಳಿಸಿ, ಶೇ.7.5 ರಷ್ಟು ಮೀಸಲಾತಿ ಸೌಲಭ್ಯ ಸಿಗುವ ರೀತಿಯಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಮಹೇಶ್, ಮೈಸೂರು ನಗರ ಎಸ್ಟಿ ಮೋರ್ಚಾ ಅಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲ್ಲಹಳ್ಳಿ ನಾಗೇಂದ್ರ ಹಾಜರಿದ್ದರು.