
*20 ಆನೆಗಳ ಆರೋಗ್ಯವನ್ನು ತಪಾಸಣೆ ನಡೆಸಿದ ವೈದ್ಯರು, ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ
ಮೈಸೂರು: ಈ ಬಾರಿ ನಡೆಯಲಿರುವ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಆರಂಭಿಸಿದ್ದು, ಆನೆಗಳ ಆರೋಗ್ಯವನ್ನು ತಪಾಸಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಆನೆಗಳ ಹೃದಯ ತಪಾಸಣೆಗಾಗಿ ಇಸಿಜಿ ಪರೀಕ್ಷೆ ನಡೆಸಲಾಗಿದೆ.
ಮೊದಲ ಹಂತವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರ ತಂಡ, ತಮ್ಮ ಸಿಬ್ಬಂದಿಗಳೊ0ದಿಗೆ ಮಡಿಕೇರಿಯ ಮತ್ತಿಗೋಡು ಹಾಗೂ ದುಬಾರೆ, ಬಂಡೀಪುರದ ರಾಂಪುರ ಆನೆ ಶಿಬಿರಗಳಿಗೆ ಭೇಟಿ ನೀಡಿ, ಸುಮಾರು 20ಕ್ಕೂ ಹೆಚ್ಚು ಸಾಕಾನೆಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಿದೆ. ಈ ಪರೀಕ್ಷೆಯ ಮೂಲಕ ಆನೆಗಳ ಆರೋಗ್ಯ ಸ್ಥಿತಿ ಹಾಗೂ ಹೆಣ್ಣಾನೆಗಳ ಗರ್ಭಧಾರಣಾ ಸ್ಥಿತಿ ತಿಳಿಯಲು ಅನುಕೂಲವಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ದಸರಾದಲ್ಲಿ ಭಾಗವಹಿಸುವ ಹೆಣ್ಣಾನೆಗಳ ರಕ್ತ ಹಾಗೂ ಮಲದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, ಈ ಹೆಣ್ಣಾನೆಗಳಿಗೆ ಅಲ್ಟಾçಸೌಂಡ್ ಮೂಲಕ ಗರ್ಭಧಾರಣೆ ಪರೀಕ್ಷೆಯನ್ನು ಮಾಡಲಾಗಿದೆ. ಜೊತೆಗೆ ಮೊದಲ ಬಾರಿಗೆ ಹೆಣ್ಣು ಮತ್ತು ಗಂಡಾನೆಗಳಿಗೆ ಇಸಿಜಿ ಮೂಲಕ ಹೃದಯ ಆರೋಗ್ಯ ತಪಾಸಣೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯ ನಂತರ ದಸರಾ ಗಜಪಡೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶಿಬಿರದ ಆನೆಗಳಿಗೆ ಹೃದಯ ಪರೀಕ್ಷೆ ಮಾಡುವ ಇಸಿಜಿ ಕಿಟ್ ಮೊದಲ ಬಾರಿಗೆ ಬಂದಿದೆ. ಹಾಗಾಗಿ ಆನೆಗಳಿಗೆ ಮೊದಲ ಬಾರಿಗೆ ಹೃದಯ ಪರೀಕ್ಷೆ ಮಾಡಲಾಗಿದೆ. ಮುಂದೆ ಎಲ್ಲ ಆನೆಗಳಿಗೂ ಇಸಿಜಿ ಪರೀಕ್ಷೆ ಮಾಡುವ ಚಿಂತನೆ ಇದೆ ಎಂದು ಪಶುವೈದ್ಯ ಡಾ.ಮುಜಿದ್ ತಿಳಿಸಿದರು.