
ಮೈಸೂರು; ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಶೇ 7ಕ್ಕೇರಿಸಿ ಆದೇಶ ಹೊರಡಿಸಲಾಗಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಬೇಕು. ಇಲ್ಲದಿದ್ದರೆ ಸರ್ಕಾರ ಉರುಳಿಸುವ ತನಕ ಹೋರಾಟವನ್ನು ನಡೆಸಲಾಗುವುದು ಎಂದು ಮಾಜಿ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದರು.
ಮಂಗಳವಾರ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಎಸ್ಟಿ ಮೋರ್ಚಾದಿಂದ ಏರ್ಪಡಿಸಲಾಗಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದಾಗಲೇ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ನೀಡಬೇಕೆಂದು ಬಹಳ ಸ್ಪಷ್ಟವಾಗಿ ಸಂವಿಧಾನದಲ್ಲಿ ಹೇಳಿದ್ದಾರೆ. ಹಾಗಾಗಿ ಮೀಸಲಾತಿ ನಮ್ಮ ಹಕ್ಕು. ಅದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಕಳೆದ 30 ವರ್ಷಗಳಿಂದ ಪರಿಶಿಷ್ಟ ಪಂಗಡದವವರಾದ ನಮ್ಮ ಸಮಾಜದವರು ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ನಮ್ಮ ಸಮಾಜದ ಸ್ವಾಮೀಜಿಗಳು ಬೆಂಗಳೂರಿನಲ್ಲಿ ನಿರಂತರವಾಗಿ ಧರಣಿ ನಡೆಸಿದ ಪರಿಣಾಮ, ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಪರಿಶಿಷ್ಟ ಪಂಗಡಕ್ಕೆ ಇದ್ದ ಮೀಸಲಾತಿಯನ್ನು ಶೇ 3 ರಿಂದ 7ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದರು. ಆದರೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೀಸಲಾತಿ ಪ್ರಮಾಣವನ್ನು ಶೇ 3 ಕ್ಕೆ ಇಳಿಸಿದ್ದಾರೆ. ಆ ಮೂಲಕ ನಮ್ಮ ಸಮಾಜಕ್ಕೆ ಘೋರ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಈಗ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಪ.ಪಂಗಡದವರ ಮೀಸಲಾತಿಯನ್ನು 7 ರಿಂದ 3ಕ್ಕೆ ರಾಜ್ಯ ಸರ್ಕಾರ ಇಳಿಸಿರುವ್ಯದರಿಂದ ನಮ್ಮ ಸಮಾಜಕ್ಕೆ ಹುದ್ದೆಗಳು ಸಿಗದೆ ಅನ್ಯಾಯವಾಗುತ್ತಿದೆ. ಶೈಕ್ಷಣಿಕವಾಗಿ, ಉದ್ಯೋಗದಲ್ಲಿಯೂ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ, ನಮ್ಮ ಸಮುದಾಯದ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಾಗಿತ್ತಿಲ್ಲ ಎಂದು ಆರೋಪಿಸಿದರು.
ಪರಿಶಿಷ್ಟ ಪಂಡಗಕ್ಕೆ ರಾಜ್ಯ ಸರ್ಕಾರ ಹೊಸ, ಹೊಸ ಜಾತಿಗಳನ್ನು ಸೇರ್ಪಡೆ ಮಾಡುತ್ತಿದೆ. ಮಾಡಲಿ ಆ ಬಗ್ಗೆ ನಮ್ಮ ಅಭ್ಯಂತರವೇನಿಲ್ಲ. ಆದರೆ ಎಷ್ಟು ಜಾತಿಗಳನ್ನು ಸೇರಿಸುತ್ತಾರೆ, ಅದಕ್ಕಿಂತ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕಲ್ಲವೇ, ಈಗಿರುವ 51 ಜಾತಿಗಳಿಗೆ ಶೇ 3 ರಷ್ಟು ಮೀಸಲಾತಿಯನ್ನು ಕೊಟ್ಟು, ಹಂಚಿಕೊಳ್ಳಿ ಎಂದರೆ ಹೇಗೆ ಸಾಧ್ಯ. ಹಾಗಾಗಿ ಪರಿಶಿಷ್ಟ ಪಂಗಡದಲ್ಲಿರುವ ಎಲ್ಲಾ ಜಾತಿಗಳು ಕೂಡ ನಮ್ಮ ಜೋತೆ ಸೇರಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ನಡೆಸಬೇಕು. ನಮ್ಮ ಜೊತೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕು, ನಮ್ಮ ಸಮುದಾಯವನ್ನು ಉಳಿಸಬೇಕು ಎಂದು ಆಗ್ರಹಿಸಿ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟವನ್ನು ನಡೆಸಲಾಗುವುದು, ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು, ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತು ಹಾಕುವ ತನಕ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಭದ್ರ ಬುನಾದಿಗೆ ನಾವು ಮೀಸಲಾತಿ ಹೆಚ್ಚಳವನ್ನು ಪಡೆಯಲೇಬೇಕಾಗಿದೆ. ಇದಕ್ಕಾಗಿ ಪಕ್ಷಾತೀತವಾಗಿ ಸಮುದಾಯದ ಎಲ್ಲಾ ಜನಪ್ರತಿನಿಧಿಗಳು, U್ಪಣ್ಯರು, ಮುಖಂಡರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.
ಖರ್ಗೆ ರಬ್ಬರ್ ಸ್ಟಾಂಪ್, ಏನೂ ಪ್ರಯೋಜನವಿಲ್ಲ; ಕಾಂಗ್ರೆಸ್ ಪರಿಶಿಷ್ಟ ಜಾತಿ, ಪಂಗಡದವರನ್ನು ಬೆಳೆಸುವ ಬದಲಾಗಿ ತುಳಿಯುತ್ತಲೇ ಬಂದಿದೆ. ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದರೂ ಕೇವಲ ರಬ್ಬರ್ ಸ್ಟಾಂಪ್ ಆಗಿದ್ದಾರೆ. ಹಾಗಾಗಿ ಅವರು ಆ ಹುದ್ದೆಯಲ್ಲಿ ಇದ್ದರೂ ಯಾವುದೇ ಪ್ರಯೋಜನವಿಲ್ಲ ಎಂದರು.
ಸಮಾವೇಶದಲ್ಲಿ ಮಾಜಿ ಸಚಿವರುಗಳಾದ ರಮೇಶ್ ಜಾರಕಿಹೊಳಿ, ಎನ್.ಮಹೇಶ್, ವಿಧಾನಪರಿಷತ್ ಸದಸ್ಯೆ ಹೇಮಲತಾನಾಯಕ್, ಮಾಜಿ ಸಂಸದ ಬಿ.ವಿ.ನಾಯಕ್, ಶಾಸಕ ರಾಜೂಗೌಡ ನಾಯಕ್, ಮಾಜಿ ಶಾಸಕ ರಾಜೇಶ್, ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ರಾಮಚಂದ್ರಪ್ಪ, ಪ್ರತಾಪ್ಗೌಡ ಪಾಟೀಲ್, ರಾಮಕೃಷ್ಣ, ನಿಗಮ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಅಪ್ಪಣ್ಣ, ಎಸ್.ಮಹದೇವಯ್ಯ, ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಾರ್ಯದರ್ಶಿ ನಾಗೇಂದ್ರ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ಮಲ್ಲೇಶ್ ನಾಯಕ, ಎಂ.ರಾಮಚAದ್ರ, ಆರ್. ಸುಂದರ್ ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.