
ಪಿರಿಯಾಪಟ್ಟಣ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ನೆಪದಲ್ಲಿ ಮತದಾರರ ಹಕ್ಕನ್ನು ಕಸಿಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಪಟ್ಟಣದ ಅಭಯ್ ಕನ್ವೆಸನಲ್ ನಲ್ಲಿ ನಡೆದ ಪಿರಿಯಾಪಟ್ಟಣ ವಿಭಾಗ ಮಟ್ಟದ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಬೂತ್ ಮಟ್ಟದ ಪ್ರತಿನಿಧಿಗಳ (ಬಿಎಲ್ಎ) ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಸ್ಐಆರ್ ಪ್ರಕ್ರಿಯೆಗೆ ನಮ್ಮ ವಿರೋಧವಿಲ್ಲ, ಜನರ ಮತದಾನದ ಹಕ್ಕನ್ನು ರಕ್ಷಣೆ ಮಾಡುವುದು ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಅದಕ್ಕಾಗಿ ದೇಶದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸಲು ಸಭೆಗಳನ್ನು ನಮ್ಮ ಪಕ್ಷ ಹಮ್ಮಿಕೊಳ್ಳುತ್ತಿದೆ, ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಬಡವರು ಮತ್ತು ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿಯುವ ಕುತಂತ್ರದಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ನೋಡಿ ಭಯ ಶುರುವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ರವರು ಭಾರತದಲ್ಲಿ ಶೋಷಿತರಿಗೆ ಮತದಾನದ ಹಕ್ಕು ನೀಡಬೇಕೆಂದು ಪ್ರತಿಪಾದಿಸಿದ್ದರು. ಅದರ ಫಲವಾಗಿ ಅವರು ಕೊಟ್ಟ ಸಂವಿಧಾನದಲ್ಲಿ ನಮಗೆ ಮತದಾನದ ಹಕ್ಕು, ಮೂಲಭೂತ ಹಕ್ಕುಗಳು ದೊರಕಿವೆ. ಆದರೆ ಇಂದು ಕೇಂದ್ರ ಸರ್ಕಾರ ಮತದಾರರ ವಿಶೇಷ ಪರಿಷ್ಕರಣೆಯ ಹೆಸರಿನಲ್ಲಿ ಮತದಾರರರನ್ನು ಪಟ್ಟಿಯಿಂದ ತೆಗೆದು ಹಾಕುವ ಕೆಲಸಗಳು ನಡೆಯುತ್ತಿವೆ ಎಂದು ದೂರಿದರು. ಯಾವ ವರ್ಗಗಳು ತಮ್ಮ ಹಕ್ಕುಗಳಿಂದ ಸೌಲಭ್ಯಗಳನ್ನು ಪಡೆಯುತ್ತಿದ್ದವೋ ಅಂತಹ ವರ್ಗಗಳ ಹಕ್ಕುಗಳನ್ನು ಮತದಾರರ ಪರಿಷ್ಕರಣೆ ನೆಪದಲ್ಲಿ ಕಸಿಯುವ, ಅವರ ಬದುಕಿಗೆ ಕೊಡಲಿ ಪೆಟ್ಟು ನೀಡುವ ಹಾಗೂ ಪ್ರಜಾಪ್ರಭುತ್ವ ದುರ್ಬಲಗೊಳಿಸುವಂತಹ ಹುನ್ನಾರದ ಪ್ರಯತ್ನಗಳನ್ನು ವಿಫಲಗೊಳಿಸಬೇಕು. ಪ್ರಜಾಪ್ರಭುತ್ವದ ಆಶಯ, ಸಾಂವಿಧಾನಿಕ ಹಕ್ಕು ಹಾಗೂ ಸಂವಿಧಾನ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್ ಸಮರ್ಥವಾಗಿ ನಿರ್ವಹಿಸುತ್ತಿದೆ. ಜನರಿಗೆ ಎಸ್ಐಆರ್ ಬಗ್ಗೆ ಸ್ಪಷ್ಟ ಅರಿವು ಮೂಡಿಸಬೇಕು. ಅರ್ಹ ಮತದಾರರನ್ನು ಪಟ್ಟಿಯಿಂದ ಕೈ ಬಿಡದಂತೆ ನೋಡಿಕೊಳ್ಳಬೇಕು. ಮಾಹಿತಿ ಕೊರತೆಯಿಂದ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಬಾರದು. ಈ ಬಗ್ಗೆ ಬಿಎಲ್‌ಎಗಳು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಮೈಮುಲ್ ನಿರ್ದೇಶಕ ಬಿ.ಎ.ಪ್ರಕಾಶ್, ಮುಖಂಡರಾದ ರಾಜೇಶ್, ಪಿ.ಮಹದೇವ್, ಸೀಗೂರು ವಿಜಯಕುಮಾರ್, ಸಿ.ತಮ್ಮಣ್ಣಯ್ಯ, ಎಂ.ಸುರೇಶ್, ಆರ್.ಎಸ್.ಮಹದೇವ್, ಸತ್ಯನಾರಾಯಣ, ಮಾಲಂಗಿ ಕುಮಾರ್, ಪಿ.ಎಸ್.ಉಪೇಂದ್ರ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.