
ಮೈಸೂರು; ನಗರದ ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಸಂಘದ ಉದ್ಘಾಟನೆ ಮತ್ತು ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಬಯೋ ಕೆಮಿಸ್ಟಿç ವಿಭಾಗದ ಪ್ರಾಧ್ಯಾಪಕ ಡಾ. ಪ್ರಸನ್ನ ಕೆ. ಸಂತೇಕಡೂರು ಮಾತನಾಡಿ, ವಿಜ್ಞಾನ ವೇದಿಕೆಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಕುತೂಹಲ, ಸಂಶೋಧನಾ ಆಸಕ್ತಿ ಮತ್ತು ಸೃಜನಶೀಲತೆಯನ್ನು ಬೆಳೆಸುವ ಒಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ವಿಜ್ಞಾನ ಸಂಘದ ಮೂಲಕ ವಿದ್ಯಾರ್ಥಿಗಳು ವಿಜ್ಞಾನ ಪ್ರದರ್ಶನ, ಮಾದರಿ ತಯಾರಿಕೆ, ವಿಜ್ಞಾನ ಪ್ರಶ್ನೋತ್ತರ ಸ್ಪರ್ಧೆಗಳು, ಉಪನ್ಯಾಸಗಳು ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದ ಮೂಲಕ ಸಕ್ರಿಯವಾಗಿ ಭಾಗವಹಿಸಬೇಕು. ವಿಜ್ಞಾನ ಸಂಘದ ಮುಖ್ಯ ಉದ್ದೇಶ ಪಠ್ಯಪುಸ್ತಕದ ಜ್ಞಾನವನ್ನು ನೀಡುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ, ತಾರ್ಕಿಕ ಚಿಂತನೆ ಮತ್ತು ನವೀನ ಆಲೋಚನೆಗಳನ್ನು ಬೆಳೆಸುವುದಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸ್ಪಷ್ಟ ಗುರಿಯನ್ನು ಹೊಂದಿದ್ದು ಇಂದಿನ ಯುಗದಲ್ಲಿ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ವೈಜ್ಞಾನಿಕ ಚಿಂತನೆ ಹೊಂದಿರುವ ಯುವಕರ ಅಗತ್ಯವಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯತತ್ಪರರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಹೆಚ್.ಸತ್ಯಪ್ರಸಾದ್ ಮಾತನಾಡಿ, ಇಂದು ಶೈಕ್ಷಣಿಕ ಪದವಿ ಮತ್ತು ಉತ್ತಮ ಅಂಕಗಳು ಸಾಕಾಗುವುದಿಲ್ಲ. ಯಶಸ್ವಿ ಜೀವನಕ್ಕಾಗಿ ಜ್ಞಾನದ ಜೊತೆಯಲ್ಲಿ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಉತ್ತಮ ಸಂವಹನ ಕೌಶಲ್ಯ, ನಾಯಕತ್ವ ಗುಣ, ಸಮಯ ನಿರ್ವಹಣೆ, ಸೃಜನಶೀಲತೆ ಹಾಗೂ ಡಿಜಿಟಲ್ ಕೌಶಲ್ಯಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ಅವಶ್ಯಕ ಎಂದರು.
ಅಂಜಲಿ ಎಂ.ಪಿ. ಅವರು ಪ್ರಾಸ್ತಾವಿಕವಾಗಿ ವಿಜ್ಞಾನ ಸಂಘದ ಧ್ಯೇಯೋದ್ದೇಶದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅನ್ನಪೂರ್ಣ, ಮಂಜುಳ, ಇಂದಿರಾ, ಶ್ರೀವಿಭಾ, ಸಿರಿ ಎಸ್. ರಾವ್, ಗಾಯತ್ರೀ ಯೋಗೇಶ್, ಲಕ್ಷಿö್ಮÃ ನಾರಾಯಣ್ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.