
ಡಿಪಿಬಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ಪಿರಿಯಾಪಟ್ಟಣ: ವಿದ್ಯಾರ್ಥಿಗಳು ಕೇವಲ ಶಿಕ್ಷಣಜ್ಞಾನ ಪಡೆದರೆ ಸಾಲದು, ಅದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಕಲಿತ ವಿದ್ಯೆಗೆ ಸಾರ್ಥಕತೆ ಬರುತ್ತದೆ ಎಂದು ಸರಗೂರು ತಾಲೂಕಿನ ಬಿ. ಮಟಕೆರೆ ಕೆ.ಪಿ.ಎಸ್. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಸಾಹಿತಿ ಡಾ.ಸಂತೋಷ್ ಚೊಕ್ಕಾಡಿ ತಿಳಿಸಿದರು.
ಪಟ್ಟಣದ ಅರಸು ಭವನದಲ್ಲಿ ಡಿಪಿಬಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳು ಒಳ್ಳೆಯ ಮನಸ್ಸಿನಿಂದ ಹೆಜ್ಜೆ ಇಟ್ಟು, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಲಿಕೆಗೆ ಕೊನೆಯಿಲ್ಲ, ಜ್ಞಾನ ಗಳಿಕೆಗೆ ನಿರಂತರ ಪ್ರಯತ್ನ ಪಟ್ಟಾಗ ಮಾತ್ರ ಉಜ್ವಲ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಆಕರ್ಷಣೆಗೆ ಒಳಗಾಗದೆ ಏಕಾಗ್ರತೆಯಿಂದ ಓದಿ: ತಹಶೀಲ್ದಾರ್ ನಿಸರ್ಗಪ್ರಿಯ
ತಹಶೀಲ್ದಾರ್ ನಿಸರ್ಗಪ್ರಿಯ ಮಾತನಾಡಿ ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ಯಾವುದೇ ಬಾಹ್ಯ ಆಕರ್ಷಣೆಗಳಿಗೆ ಒಳಗಾಗದೆ ಏಕಾಗ್ರತೆಯಿಂದ ಓದಿನ ಕಡೆ ಗಮನಹರಿಸಿ, ಪೋಷಕರಿಗೆ ಹಾಗೂ ಕಾಲೇಜಿಗೆ ಒಳ್ಳೆಯ ಹೆಸರು ತರಬೇಕು. ತಂತ್ರಜ್ಞಾನ ಅತಿ ವೇಗವಾಗಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ಸಂಶೋಧನೆಯ ಕಡೆಗೂ ಗಮನ ಹರಿಸಬೇಕು ಎಂದು ಕರೆ ನೀಡಿದರು.ಪ್ರಾಂಶುಪಾಲರಾದ ದಿನೇಶ್ ಡಿ.ಎ. ಮಾತನಾಡಿ, ನಮ್ಮ ಕಾಲೇಜು ಪ್ರಾರಂಭವಾಗಿ 50 ವರ್ಷಗಳು ತುಂಬಿವೆ. ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ಕಂಪ್ಯೂಟರ್ ಶಿಕ್ಷಣ, ಉತ್ತಮ ಗ್ರಂಥಾಲಯ, ಪ್ರಯೋಗಾಲಯ ಹಾಗೂ ನುರಿತ ಉಪನ್ಯಾಸಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿಯೇ ಈ ಬಾರಿ ಪ್ರಥಮ ಪಿ.ಯು.ಸಿ.ಗೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಿದಾಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.
ಅಲ್ಲದೆ, ವಾಣಿಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿ ಪಡೆದ ಅದಿಬಾ ಕೌಸರ್, ಹರಿಣಿ ಬಿ.ಎಂ., ಗುರುಪ್ರಸಾದ್, ಅಮೂಲ್ಯ, ಸ್ಪೂರ್ತಿ ಎಂ.ಎಸ್. ಹಾಗೂ ಕಲಾ ವಿಭಾಗದಲ್ಲಿ ಸಾಧನೆ ಮಾಡಿದ ರೀನಾ ಎಂ.ಕೆ., ಅಂಜನಾ ಎಂ., ಕಿರಣ್, ಪ್ರಿಯಾದರ್ಶಿನಿ ಎಸ್.ಜಿ. ಅವರನ್ನು ಕಾಲೇಜಿನ ವತಿಯಿಂದ ಹಾಗೂ ಉಪನ್ಯಾಸಕರು ವೈಯಕ್ತಿಕವಾಗಿ ಧನಸಹಾಯ ನೀಡಿ, ಶಾಲು ಹೊದಿಸಿ ಗೌರವಿಸಿದರು.
ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಈರಯ್ಯ, ಸದಸ್ಯರಾದ ಶಿವಸ್ವಾಮಿ, ಮಂಜುನಾಥ್, ಸಾಂಸ್ಕೃತಿಕ ಕಾರ್ಯದರ್ಶಿ ಆಯಿಷಾ ಬೇಗಮ್, ಎನ್.ಎಸ್.ಎಸ್ ಶಿಬಿರಾಧಿಕಾರಿ ಕುಮಾರ್ ಎಸ್.ಎ., ಉಪನ್ಯಾಸಕರುಗಳಾದ ಸ್ವಾಮಿಗೌಡ, ಥಾಮಸ್ ಪಿ.ಸಿ., ಬಸವರಾಜು, ದೀಪಾಂಜಲಿ, ಅನಿತಾ, ಮುರಳಿ, ಕುಮಾರಿ ಶ್ವೇತಾ, ದ್ವಿತೀಯ ದರ್ಜೆ ಸಹಾಯಕ ಚೆಲುವಯ್ಯ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.