
ಮೈಸೂರು : ಶಾಲಾ ಮಕ್ಕಳಿಗೆ ಪಠ್ಯ ಜ್ಞಾನದಷ್ಟೇ, ಸಹ ಪಠ್ಯಗಳ ಜ್ಞಾನ ಮುಖ್ಯ. ಪಠ್ಯ ಜ್ಞಾನ ಮಕ್ಕಳ ಭೌದ್ಧಿಕ ವಿಕಾಸಕ್ಕೆ ಸಹಕಾರಿಯಾದರೆ, ಸಹಪಠ್ಯಗಳ ಜ್ಞಾನ ಅವರ ಭೌತಿಕ ಹಾಗೂ ಮಾನಸಿಕ ವಿಕಾಸಕ್ಕೆ ತುಂಬಾ ಅಗತ್ಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ನಿರ್ದೇಶಕ ಟಿ. ಸತೀಶ್ ಜವರೇಗೌಡ ಹೇಳಿದರು.
ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಎಸ್. ಶಶಿಧರ್ ಅವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ತರಗತಿಯೊಳಗಿನ ವಿಷಯ ಕಲಿಕೆ ಮಕ್ಕಳಿಗೆ ಲವಲವಿಕೆ ತುಂಬಲಾರದು. ಆದರೆ, ಬಯಲಿನಲ್ಲಿ ಕಲಿಯುವ ಕ್ರೀಡೆ, ನಾಟಕ, ಸಂಗೀತ, ಜನಪದ ಕಲೆಗಳು ಮಕ್ಕಳಿಗೆ ಹೆಚ್ಚು ರಂಜನೆ ನೀಡುವ ಜೊತೆ ಜೊತೆಗೆ ಮನಸ್ಸಿನ ವಿಕಾಸಕ್ಕೂ ನೆರವಾಗುತ್ತವೆ. ಆದ್ದರಿಂದ, ಶಾಲೆಗಳಲ್ಲಿ ವಿಷಯ ಶಿಕ್ಷಕರ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರು, ಸಂಗೀತ ಹಾಗೂ ನಾಟಕ ಶಿಕ್ಷಕರು ಇರಬೇಕು ಎಂದರು.
ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಮಾತನಾಡಿ, ಅನುಭವಿ ದೈಹಿಕ ಶಿಕ್ಷಣ ಶಿಕ್ಷಕ ಎ.ಎಸ್. ಶಶಿಧರ್ ಅವರು ನಮ್ಮ ಮೆಲ್ಲಹಳ್ಳಿಯ ಶಾಲೆಯ ಮಕ್ಕಳು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಅವಕಾಶ ಸೃಷ್ಟಿಸಿ, ನಮ್ಮ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಆಡಳಿತಾತ್ಮಕ ಕೆಲಸಗಲ್ಲಿ ಸಹ ತುಂಬಾ ಸಹಕಾರ ನೀಡುತ್ತಿದ್ದರು. ಅವರ ಸೇವಾ ಗುಣ ಮಾದರಿಯಾದುದು ಎಂದರು.
ಹೃದಯಸ್ಪರ್ಶಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎ.ಎಸ್. ಶಶಿಧರ್, ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಶಿಸ್ತು ಇರಲೇಬೇಕು. ಶಿಸ್ತಿನ ಗುಣವಿದ್ದರೆ ಏನಾದರೂ ಸಾಧಿಸಲು ಸಾಧ್ಯ. ಶಿಸ್ತಿಲ್ಲದ ಜೀವನ ಯಾವತ್ತಿಗೂ ವ್ಯರ್ಥ. ಆದ್ದರಿಂದ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತಿನ ಗುಣದೊಂದಿಗೆ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್, ಹಾರೋಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ಬಿ. ಶೆಟ್ಟಿ, ಹಿರಿಯ ಶಿಕ್ಷಕಿಯರಾದ ಪಿ.ಎಲ್. ಭಾಗ್ಯ, ಕಲ್ಪನಾ, ಎಸ್.ಜೆ. ಸತ್ಯವತಿ, ರಂಗಸ್ವಾಮಿ, ಮಹಮ್ಮದ್ ಸುಹೇಲ್, ವಿದ್ಯಾರ್ಥಿಗಳಾದ ರಾಜಗೋಪಾಲ್, ನವೀನ್, ವರುಣ್ ಅವರು ದೈಹಿಕ ಶಿಕ್ಷಣ ಶಿಕ್ಷಕ ಎ.ಎಸ್. ಶಶಿಧರ್ ಅವರ ಜೊತೆಗಿನ ಒಡನಾಟ ಕುರಿತು ಮಾತನಾಡಿದರು.