
ಮೈಸೂರು: ನಾನು ಸಾರ್ವಜನಿಕ ಜೀವನದಲ್ಲಿ ಮುಂದುವರೆಯುತ್ತೇನೆ. ಆದರೆ ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಮಂಗಳವಾರ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮಾಜಿ ಮುಖ್ಯಮಂತ್ರಿ ನಸಿದ್ದರಾಮಯ್ಯ ಅವರು ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂಬುದು ಬ್ಲಾಕ್ ಮೇಲ್ ತಂತ್ರವಾಗಿದೆ. ಅವರು ಹಿಂದುಳಿದ ವರ್ಗಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಲಿ. ಅವರು ಬರಿ ಬೊಗಳೆ ಬಿಡೋದು ಹಾಗೂ ಡೋಂಗಿ ಆಟ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರವಾಗಲೀ ಅಕ್ಷರ ಮತ್ತು ಆರೋಗ್ಯದ ಕಡೆ ಗಮನಹರಿಸಬೇಕು. ಇಲ್ಲದಿದ್ದರೆ ಅರಾಜಕತೆ ಉಂಟಾಗುತ್ತದೆ. ಪ್ರಸ್ತುತ ರಾಜ್ಯ ಮತ್ತು ದೇಶದಲ್ಲಿ ಅರಾಜಕತೆಯ ಸ್ಥಿತಿ ಇದೆ. ಯಾರು ಕೂಡ ಆರೋಗ್ಯ ಮತ್ತು ಶಿಕ್ಷಣದ ಕಡೆ ಗಮನಹರಿಸುತ್ತಿಲ್ಲ. ಸ್ವಾಮೀಜಿಗಳೆಲ್ಲ ಶಾಲೆ, ಕಾಲೇಜು, ಆಸ್ಪತ್ರೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ, ಯಾವುದೇ ಸ್ವಾಮೀಜಿ ಸೇವೆ ಮಾಡುತ್ತಿಲ್ಲ. ದೇಶದಲ್ಲಿ ನೀಟ್ ಅಕ್ರಮದ ವಿರುದ್ಧ ನಡೆದ ಹೋರಾಟದ ರೀತಿ ಹೋರಾಟ ಮಾಡಬೇಕಾಗಿದೆ ಎಂದರು.
ಕೆಪಿಎಸ್ಸಿ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಉನ್ನತ ಮಟ್ಟದ ಅಧಿಕಾರಿಗಳನ್ನು ಕೇವಲ ಜಾತಿ ಆಧಾರದ ಮೇಲೆ ನೇಮಕಾತಿ ಮಾಡಿ, ಭ್ರಷ್ಟಾಚಾರ ನಡೆಸುವ ಈ ಸಂಸ್ಥೆಯನ್ನು ಸರಿಪಡಿಸಬೇಕು ಎಂದರು. ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗುತ್ತಿದ್ದರೂ, ನಾಯಕರೆಲ್ಲ ದೆಹಲಿಯಲ್ಲಿ ಹೋಗಿ, ಮಂತ್ರಿಗಾಗಿ ಲಾಬಿ ಮಾಡುತ್ತಿದ್ದಾರೆ. ಹೀಗಾದರೆ ರಾಜ್ಯದ ಸ್ಥಿತಿ ಏನು? ಕೂಡಲೇ ಕರ್ನಾಟಕವನ್ನು ಬರಪೀಡಿತ ರಾಜ್ಯ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ನಾಡ ಹಬ್ಬ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ. ಮೈಸೂರು ಸಂಸದ ಯದುವೀರ್ ಒಡೆಯರ್ ಸಹ ದಸರಾ ನಾಡ ಹಬ್ಬ, ಸಾಂಪ್ರದಾಯಿಕವಾಗಿ ನಡೆಯುವ ಆಚರಣೆಯಲ್ಲಿ ಕಂಬಳ ನಡೆಸುವುದು ಸರಿ ಹೊಂದುವುದಿಲ್ಲ ಎಂದು ಹೇಳಿದ್ದಾರೆ ಎಂದರು.