
ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಮಾಜಿ ಸಂಸದ ಪ್ರತಾಪ್ ಸಿಂಹರಿಗೆ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಸವಾಲು ಹಾಕಿದರು.
ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಬೆಟ್ಟದ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸಕಲೇಶಪುರ ಪ್ರತಾಪ್ ಸಿಂಹರ ಸ್ವಂತ ಊರು. ಮುಂದಿನ ಚುನಾವಣೆಗೆ ಅದು ಸಾಮಾನ್ಯ ಕ್ಷೇತ್ರವಾದರೆ, ನಾನು ಅಲ್ಲಿಂದಲೇ ಸ್ಪರ್ಧಿಸಲು ನಮ್ಮ ನಾಯಕರಲ್ಲಿ ಟಿಕೆಟ್ ಕೇಳುತ್ತೇನೆ. ಪ್ರತಾಪ್ ಸಿಂಹ ಧೈರ್ಯವಿದ್ದರೆ ಅಲ್ಲೇ ಸ್ಪರ್ಧಿಸಲಿ, ಯಾರು ಗೆಲ್ಲುತ್ತಾರೆ ನೋಡೋಣ ಎಂದು ಸವಾಲೆಸೆದರು.
ಸಕಲೇಶಪುರ ಮಾತ್ರವಲ್ಲದೆ, ಚಾಮರಾಜ ಕ್ಷೇತ್ರಕ್ಕೆ ಬಂದರೂ ಸ್ಪರ್ಧೆಗೆ ಸಿದ್ಧ. ಚಾಮರಾಜ ಕ್ಷೇತ್ರದ ಜನರಿಗೆ ಹರೀಶ್ ಗೌಡ ಏನೆಂಬುದು ಗೊತ್ತಿದೆ ಎಂದು ತಿರುಗೇಟು ನೀಡಿದರು.
ರಾಜಕೀಯ ವಿಚಾರಗಳನ್ನು ವೈಯಕ್ತಿಕ ಮಟ್ಟಕ್ಕೆ ಒಯ್ಯಬಾರದು. ನನ್ನ ಹಿನ್ನೆಲೆ ಬಿಚ್ಚಿಡುತ್ತೇನೆ ಎಂದು ಬೆದರಿಕೆ ಹಾಕುತ್ತೀರಲ್ಲ, ಬಿಚ್ಚಿಡಿ ನೋಡೋಣ. ಜೊತೆಯಲ್ಲಿರುವವರನ್ನು ನಿಂದಿಸುವುದು ಒಬ್ಬ ಮಾಜಿ ಸಂಸದರಿಗೆ ಶೋಭೆಯಲ್ಲ. ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ವಾಗ್ದಾಳಿ ನಡೆಸಿದರು.