
ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗಳು ನಮ್ಮ ಬದುಕನ್ನು ಬದಲಾಯಿಸುತ್ತವೆ. ನಿಗದಿತ ಸಮಯದಲ್ಲಿ ಕೆಲಸ ಪಡೆದು ಸಾರ್ವಜನಿಕ ಸೇವೆ ಮಾಡಿ ಎಂದು ಐಪಿಎಸ್ ಅಧಿಕಾರಿ ಕೆ.ಎಲ್. ಸೂರಜ್ ಹೇಳಿದರು.
ಶುಕ್ರವಾರ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಿದ ಕೆಪಿಎಸ್‌ಸಿ ಮತ್ತು ಕೆಇಎ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಮುಖ್ಯ ಸಂದೇಶಗಳು,ಗುರಿ ಮತ್ತು ನಿಖರತೆ ಕೆಲಸ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಒಂದು ಉತ್ತಮ ಕೆಲಸ ಪಡೆಯಿರಿ. ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಏನೇ ಕೆಲಸ ಸಿಕ್ಕರೂ ಅದನ್ನು ಉತ್ತಮವಾಗಿ ನಿರ್ವಹಿಸಿ. ನೀವು ಏನು ಆಗಬೇಕು, ಆಗಬಾರದು ಎಂಬುದನ್ನು ಕಂಡುಕೊಳ್ಳಿ ಬಳಿಕ ನಿಮ್ಮ ಗುರಿಯ ದಾರಿ ಸ್ಪಷ್ಟವಾಗಲಿದೆ ಎಂದು ಹೇಳಿದರು.
ನೀವು ಏನೇ ಮಾಡಿದರೂ ಅದನ್ನು ತೀವ್ರವಾಗಿ ಮತ್ತು ನಿಖರವಾಗಿ ಮಾಡಿ. ಏನು ನೋಡಬೇಕು, ಏನು ನೋಡಬಾರದು ಎಂದು ನೀವೇ ನಿರ್ಧರಿಸಿ. ಪದವಿ ಹಂತದಲ್ಲಿರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಆರಂಭಿಸಿ. ಪರೀಕ್ಷಾ ಮಾದರಿ ಅರ್ಥಮಾಡಿಕೊಂಡು ವಿಷಯಗಳನ್ನು ಬೇಗ ಓದಲು ಶುರು ಮಾಡುವುದೇ ಯಶಸ್ಸಿಗೆ ಮುಖ್ಯ. ನಿಮ್ಮ ಗುರಿಯ ಬಗ್ಗೆ ಇಂದೇ ನಿರ್ಧರಿಸಿ, ಸಮಯ ನಿಗದಿ ಮಾಡಿಕೊಳ್ಳಿ. ನಿಮ್ಮ ಓದೇ ನಿಮ್ಮ ಸ್ನೇಹಿತ. ನಿಮಗೆ ಓದಿನ ಹಸಿವಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ ಯಾವುದನ್ನು ಓದಬೇಕು ಎನ್ನುವುದಕ್ಕಿಂತ ಯಾವುದನ್ನು ಓದಬಾರದು ಎಂಬುದನ್ನು ನೆನಪಿಟ್ಟುಕೊಳ್ಳಿ. ಶ್ರದ್ಧೆ, ಏಕಾಗ್ರತೆ ಮತ್ತು ಆಸಕ್ತಿಯಿಂದ ಶ್ರಮಪಟ್ಟು ಓದಿದರೆ ಮಾತ್ರ ಯಶಸ್ಸು ಕಾಣಬಹುದು ಎಂದರು.
ಕೆಎಸ್‌ಎAಸಿಎಲ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಲಕ್ಷಾಂತರ ಜನ ಪರೀಕ್ಷೆ ಬರೆಯುತ್ತಾರೆ. ಆದರೆ ಆಯ್ಕೆಯಾಗುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಹೀಗಾಗಿ ಶ್ರದ್ಧೆಯಿಂದ ಓದುವ ಅಭ್ಯಾಸ ಮಾಡಿಕೊಳ್ಳಿ. ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತೆ, ಹಣದ ಆಮಿಷ ಒಡ್ಡುತ್ತಾರೆ ಎನ್ನುವ ಊಹಾಪೋಹದ ಮನಸ್ಥಿತಿಯಿಂದ ಹೊರಬಂದು ಕೇವಲ ಓದಿನ ಕಡೆ ಗಮನಹರಿಸಿ. ಇದು ಎಐ ಯುಗ, ಎಲ್ಲವೂ ಕ್ಷಣಾರ್ಧದಲ್ಲಿ ಸಿಗುತ್ತದೆ ಎಂದು ಹೇಳಿದರು.
ಸಹಾಯಕ ಪೊಲೀಸ್ ಆಯುಕ್ತ ರವಿ ಪ್ರಸಾದ್ ಮಾತನಾಡಿ, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಓದಿ, ಮಾದರಿ ಪರೀಕ್ಷೆಗಳನ್ನು ತೆಗೆದುಕೊಳ್ಳಿ. ಆತ್ಮವಿಶ್ವಾಸ ಮತ್ತು ಪರಿಶ್ರಮ ಇಟ್ಟುಕೊಳ್ಳಿ, ಇಂದಿನ ಯುವಕರು ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಮಾಡಿಕೊಳ್ಳುವಲ್ಲಿ ಹಿಂದೆ ಉಳಿದಿದ್ದಾರೆ. ಅದರಲ್ಲೂ ದಕ್ಷಿಣ ಕರ್ನಾಟಕ ಭಾಗದ ಯುವಕರಲ್ಲಿ ಉತ್ಸಾಹ ಕಡಿಮೆಯಾಗಿದೆ. ಉತ್ತರ ಕರ್ನಾಟಕದ ಯುವಕರು ಹೆಚ್ಚು ಸರ್ಕಾರಿ ಕೆಲಸ ಪಡೆಯುತ್ತಿದ್ದಾರೆ ಎಂದರು.
ಲೆಕ್ಕಪತ್ರ ಇಲಾಖೆಯ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿದ್ದರಾಜು ಮಾತನಾಡಿ, ಶ್ರಮ ಮತ್ತು ಶ್ರದ್ಧೆ ಎಂದಿಗೂ ವ್ಯರ್ಥವಾಗುವುದಿಲ್ಲ. ಕೆಎಸ್‌ಓಯು ಏರ್ಪಡಿಸಿರುವ ಈ ತರಬೇತಿ ಶಿಬಿರವು ಅಭ್ಯರ್ಥಿಗಳಿಗೆ ಶುಭವನ್ನು ತರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕೆಎಸ್‌ಓಯು ಕುಲಪತಿ ಪ್ರೊ. ಎ.ಪಿ. ಜ್ಞಾನಪ್ರಕಾಶ್ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಬರವಣಿಗೆ ಮುಖ್ಯವಾಗುತ್ತದೆ. ಹೀಗಾಗಿ ಓದುವಾಗ ಬರೆಯುವ ಅಭ್ಯಾಸ ಮಾಡಿಕೊಳ್ಳಿ. ಯುಪಿಎಸ್ಸಿ ಪರೀಕ್ಷೆ ಬರೆಯುವಾಗ ನಿಮ್ಮ ಬರವಣಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಓದುವಾಗ ಟಿಪ್ಪಣಿ ಮಾಡಿಕೊಳ್ಳಿ, ಉತ್ತರ ಹೇಗೆ ಬರೆಯಬೇಕು ಎಂಬುದನ್ನು ಮನನ ಮಾಡಿಕೊಳ್ಳಿ. ನೀವೆಲ್ಲರೂ ಸರ್ಕಾರಿ ಕೆಲಸ ಪಡೆದು ಉತ್ತಮ ಸ್ಥಾನ ಪಡೆದುಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್‌ಒಯು ಪರೀಕ್ಷಾಂಗ ಕುಲಸಚಿವ ಪ್ರೊ. ಆನಂದ್ ಸಿ.ಎಸ್., ಡೀನ್ (ಶೈಕ್ಷಣಿಕ) ಪ್ರೊ. ರಾಮನಾಥಂ ನಾಯ್ಡು, ಡೀನ್ (ಅಧ್ಯಯನ ಕೇಂದ್ರ) ಡಾ. ಆನಂದ ಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶೈಲೇಶ್ ರಾಜೇ ಅರಸ್, ಸಹಾಯಕ ಪ್ರಾಧ್ಯಾಪಕ ಡಾ. ಬೀರಪ್ಪ, ಸ್ಟುಡಿಯೋ ವಿಭಾಗದ ಪ್ರೊಡ್ಯೂಸರ್ ಬಿ. ಸಿದ್ದೇಗೌಡ, ಗಣೇಶ್ ಕೆ.ಜಿ. ಕೊಪ್ಪಲ್ ಮತ್ತಿತರರು ಉಪಸ್ಥಿತರಿದ್ದರು.