
ಸುರಕ್ಷಿತ ಸ್ಥಳಗಳಿಗೆ ತೆರಳಲು ಕಾರ್ಯಪಾಲಕ ಎಂಜನಿಯರ್ ಮನವಿ
ಎಚ್.ಡಿ.ಕೋಟೆ: ರಾಜ್ಯದಲ್ಲಿ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಬಿನಿ ಜಲಾಶಯ ಈ ಬಾರಿ ತಡವಾಗಿ ಭರ್ತಿಯಾಗುವತ್ತ ಸಾಗಿದೆ. 2284 ಅಡಿ ಸಾಮರ್ಥ್ಯದ ಕಪಿಲಾ ಜಲಾಶಯ ಶನಿವಾರ ಗರಿಷ್ಠ ಮಟ್ಟ ತಲುಪಿದ್ದು, 2281 ಅಡಿ ನೀರು ಸಂಗ್ರಹವಾಗಿದೆ. ಪ್ರಸ್ತುತ ಅಣೆಕಟ್ಟೆಗೆ 16 ರಿಂದ 18 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಬರುತ್ತಿದ್ದು, 6 ರಿಂದ 8 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಹೀಗಾಗಿ ಭಾನುವಾರ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ.
ಬಹುತೇಕ ಎಲ್ಲ ವರ್ಷಗಳಲ್ಲಿಯೂ ಜೂನ್ ಅಥವಾ ಜುಲೈ ಮೊದಲ ವಾರದಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ, ಈ ವರ್ಷದ ವಾಡಿಕೆ ಹಾಗೂ ಮುಂಗಾರು ಮಳೆ ಕೈಕೊಟ್ಟಿರುವುದು ಹಾಗೂ ಎಲ್ ನಿನೋ ಪರಿಣಾಮ ತಡವಾಗಿ, ಆಗಸ್ಟ್ ಮೊದಲ ದಿನ ಜಲಾಶಯ ತುಂಬುವತ್ತ ಸಾಗಿದೆ.
ಕೇರಳದ ವೈನಾಡಿನಲ್ಲಿ ಮಳೆರಾಯ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಹರಿಯುವ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಸ್ತುತ ಅಣೆಕಟ್ಟೆಗೆ ಭಾರಿ ಪ್ರಮಾಣದ ನೀರು ತಲುಪುತ್ತಿದ್ದು, ನದಿ ನೀರು ಹಂಚಿಕೆ ಸಂಘರ್ಷದ ನಡುವೆ ಕಾವೇರಿ ಜಲಾನಯನ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೇರಳದ ವೈನಾಡು ಭಾಗದಲ್ಲಿ 40 ಮಿ.ಮೀ ಮಳೆಯಾಗಿದ್ದರೆ, ಹೆಚ್.ಡಿ.ಕೋಟೆ ಭಾಗದ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲೂ ಮಳೆ ಆಗಿರುವುದು ಜಲಾಶಯ ಭರ್ತಿಗೆ ಕಾರಣವಾಗಿದೆ.
( ಕೋಟ್ )
ಕೇರಳದ ವೈನಾಡಲ್ಲಿ ಭಾರಿ ಮಳೆಗುತ್ತಿರುವ ಪರಿಣಾಮ ಕಬಿನಿ ಜಲಾಶಯಕ್ಕೆ ಅಪಾರ ನೀರು ಹರಿದುಬರುತ್ತಿದ್ದು, ಹೊರಹರಿವು ಪ್ರಮಾಣ ಕೂಡ ಹೆಚ್ಚಿಸಬೇಕಾಗಿದೆ. ಹೀಗಾಗಿ ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕಾಗಿದೆ. ತಗ್ಗು ಪ್ರದೇಶದ ಜನರು, ತಮ್ಮ ಸಾಕುಪ್ರಾಣಿಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತರಳಬೇಕಾಗಿ ವಿನಂತಿ.
– ರಂಗಯ್ಯ, , ಕಾರ್ಯಪಾಲಕ ಎಂಜನಿಯರ್
ಈ ಬಾರಿಯ ಮುಂಗಾರು ಕೈ ಕೊಟ್ಟಿದ್ದರಿಂದ ಜೂ.ತಿಂಗಳಲಿನಲ್ಲಿ ಬರ ಆವರಿಸಿತ್ತು. ಕುಡಿಯುವ ನೀರಿಗೂ ಸಂಕಷ್ಟ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಜೂನ್ ತಿಂಗಳಿಗೂ ಮೊದಲೇ ಎಚ್ಚರಿಸಿತ್ತು. ಇದೀಗ, ರಾಜ್ಯದಾದ್ಯಂತ ಶೇ.28ರಷ್ಟು ಮಳೆ ಕೊರತೆಯಾಗಿದ್ದರೆ, ದಕ್ಷಿಣ ಒಳನಾಡಿನ ಮೈಸೂರು ಭಾಗದ ಮಳೆಯಲ್ಲಿ ಶೇ.36 ಕೊರತೆಯಾಗಿದೆ. ಕಬಿನಿ ಜಲಾಶಯದ ನೀರನ್ನು ಅವಲಂಬಿಸಿ ಬಲ ದಂಡೆ ನಾಲೆಯ 108060 ಹೆಕ್ಟೇರ್, ಎಡ ದಂಡೆ ನಾಲೆಯ 3 ಸಾವಿರ ಹೆಕ್ಟೇರ್ ಪ್ರದೇಶದ ರೈತರು ಬೆಳೆ ಬೆಳೆಯುತ್ತಿದ್ದರು. ಖಾರಿಫ್ ಬೆಳೆಗೆ ಕಬಿನಿ ಜಲಾಶಯದ ನೀರು ಪ್ರಮುಖವಾಗಿದ್ದು, ಬರದ ಹಿನ್ನೆಲೆ ಬೆಳೆ ಬೆಳೆಯಲು ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಿರುವ ಕಾವೇರಿ ನೀರಾವರಿ ನಿಗಮ, ಕುಡಿಯುವ ನೀರಿಗೆ ಕಾಯ್ದಿರಿಸಿಕೊಂಡಿತ್ತು. ಇದೀಗ, ಕಬಿನಿ ಜಲಾಶಯ ಭರ್ತಿ ಆಗುತ್ತಿದ್ದರೂ ಇಲ್ಲಿನ ಬೆಳೆಗಳಿಗೆ ನೀರು ಬಿಡುವ ಸಾಧ್ಯತೆ ತೀರಾ ಕಡಿಮೆ.
ನಮ್ಮ ಪಾಲಿನ ಕಾವೇರಿ ನೀರನ್ನು ಕೊಡಲೇಬೇಕು ಎಂದಿರುವ ತಮಿಳುನಾಡಿನ ವಾದವನ್ನು ಪುರಸ್ಕರಿಸಿರುವ ಕಾವೇರಿ ನೀರು ನಿರ್ವಹಣಾ ಸಮಿತಿ, ನಿತ್ಯವೂ 3.5ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜ ಜಲಾಶಯ ತುಂಬದ ಪರಿಣಾಮ, ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾದ ಕಬಿನಿಯಿಂದ ತಮಿಳುನಾಡಿಗೆ ನೀರು ಬಿಟ್ಟು ಕಾನೂನು ಪಾಲಿಸುವ ಅನಿವಾರ್ಯತೆ ಸರ್ಕಾರಕ್ಕಿದೆ. ಇದರಿಂದ ಇಲ್ಲಿನ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ತಮಿಳುನಾಡಿನ ರೈತರ ಬೆಳೆಗಳಿಗೆ ನೀರು ಬಿಡುತ್ತಿರುವುದು ಸಹಜವಾಗಿ ಈ ಭಾಗದವರ ಆಕ್ರೋಶಕ್ಕೆ ಕಾರಣವಾಗಿದೆ.
