Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಾನೂನಿನ ಅಜ್ಞಾನ ಅಪರಾಧದಿಂದ ಮುಕ್ತಿ ನೀಡಲ್ಲ: ಹೆಚ್. ಶಶಿಧರ್ ಶೆಟ್ಟಿ

ಮೈಸೂರು:ಕಾನೂನಿನ ಬಗ್ಗೆ ಅರಿವಿಲ್ಲದಿರುವುದು ಅಥವಾ ಮಾಹಿತಿ ಇಲ್ಲದಿರುವುದು ಅಪರಾಧ.ತಪ್ಪಿನಿಂದ ಯಾವುದೇ ರೀತಿಯ ವಿನಾಯಿತಿ ನೀಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಹಾಗೂ ವಿದ್ಯಾರ್ಥಿಗಳು ದೇಶದ ಕಾನೂನುಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಹೇಳಿದರು.
ಸೋಮವಾರ ನಗರದ ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರು ಹಾಗೂ ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ `ಪೋಕ್ಸೋ ಕಾಯ್ದೆ, ಮಾದಕ ದ್ರವ್ಯ ದುರ್ಬಳಕೆ ತಡೆಗಟ್ಟುವುದು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006′ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ನಮ್ಮ ದೇಶದಲ್ಲಿ ಸಾವಿರಾರು ಕಾನೂನುಗಳಿವೆ. ಪ್ರತಿಯೊಂದು ಕಾನೂನಿನ ಜ್ಞಾನ ಎಲ್ಲರಿಗೂ ಇರಲು ಸಾಧ್ಯವಿಲ್ಲದಿದ್ದರೂ, ದೈನಂದಿನ ಜೀವನಕ್ಕೆ ಹಾಗೂ ಸಮಾಜಕ್ಕೆ ಅಗತ್ಯವಿರುವ ಮೂಲಭೂತ ಕಾನೂನುಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ಹೊಂದಿರಬೇಕು. ಕಾನೂನಿನ ಅರಿವು ಕೇವಲ ಅನಕ್ಷರಸ್ಥರಿಗೆ ಮಾತ್ರವಲ್ಲದೆ, ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ಪ್ರತಿಯೊಬ್ಬ ವಿದ್ಯಧರರಿಗೂ ಅಗತ್ಯವಾಗಿದೆ ಎಂದರು.
ಕಾನೂನಿನ ಪ್ರಕಾರ ಕಾನೂನಿನ ಅಜ್ಞಾನ ಸಮರ್ಥನೆಯಲ್ಲ. ಕಾನೂನು ಗೊತ್ತಿರಲಿಲ್ಲ ಎಂಬ ಕಾರಣಕ್ಕೆ ಮಾಡಿದ ತಪ್ಪಿಗೆ ಅಥವಾ ಅಪರಾಧಕ್ಕೆ ಶಿಕ್ಷೆಯಿಂದ ವಿನಾಯಿತಿ ಸಿಗುವುದಿಲ್ಲ. ನಾವು ಮತ್ತೊಬ್ಬರ ಹಕ್ಕನ್ನು ಉಲ್ಲಂಘಿಸಿದಾಗ ಕಾನೂನಿನ ತೊಡಕುಗಳು ಎದುರಾಗುತ್ತವೆ ಎಂದು ತಿಳಿಸಿದರು.
ವಾಹನ ಚಾಲನೆ ಕಲಿಯುವುದು ಮುಖ್ಯ. ಆದರೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಚಾಲನಾ ಪರವಾನಗಿ , ವಾಹನ ನೋಂದಣಿ , ವಿಮೆ ಹಾಗೂ ಹೆಲ್ಮೆಟ್ ಧರಿಸುವುದು ಸೇರಿದಂತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಡ್ರಗ್ಸ್ ಜಾಲದ ವಿರುದ್ಧ ಹೋರಾಡಲು ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಸಂತ್ರಸ್ತರನ್ನು ಅಪರಾಧಿಗಳನ್ನಾಗಿ ನೋಡದೆ ಅವರನ್ನು ರಕ್ಷಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.
ಯಾರಾದರೂ ಡ್ರಗ್ಸ್ ಮಾರಾಟ ಮಾಡುತ್ತಿದ್ದರೆ ಅಥವಾ ಸೇವಿಸುತ್ತಿದ್ದರೆ ತಕ್ಷಣ ಉಚಿತ ನಾರ್ಕೋಟಿಕ್ಸ್ ಹೆಲ್ಪ್ಲೈನ್ ಸಂಖ್ಯೆ 1933 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಗುರುತನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುತ್ತದೆ. ಅಲ್ಲದೆ ಡ್ರಗ್ಸ್ ಸೇವಿಸುವವರನ್ನು ಅಪರಾಧಿಗಳು ಎಂದು ಪರಿಗಣಿಸದೆ ಸಂತ್ರಸ್ತರು ಎಂದು ಪರಿಗಣಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಪ್ರಸ್ತುತ 8,000ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ಬಾಕಿ ಇವೆ. ಪೋಕ್ಸೋ ವಿಶೇಷ ನ್ಯಾಯಾಲಯಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದರು.
18 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವು ಜಾಮೀನು ರಹಿತ ಹಾಗೂ ಕಠಿಣ ಶಿಕ್ಷೆ (10, 20 ಅಥವಾ 30 ವರ್ಷಗಳ ಜೈಲು ಶಿಕ್ಷೆ ನೀಡುವ ಅಪರಾಧವಾಗಿದೆ . ಲೈಂಗಿಕ ದೌರ್ಜನ್ಯ ಕೇವಲ ಹೆಣ್ಣು ಮಕ್ಕಳ ಮೇಲೆ ಮಾತ್ರವಲ್ಲ, ಸಮೀಕ್ಷೆಯೊಂದರ ಪ್ರಕಾರ ಶೇಕಡಾ 43 ರಷ್ಟು ಗಂಡು ಮಕ್ಕಳ ಮೇಲೆಯೂ ನಡೆಯುತ್ತಿದೆ. ಆದರೆ ಹಲವು ಕಾರಣಗಳಿಂದ ಅವು ಬೆಳಕಿಗೆ ಬರುತ್ತಿಲ್ಲ ಎಂದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಹೆಚ್. ಲೋಕೇಶ್ ಮಾತನಾಡಿ, ಇಂದಿನ ಪೀಳಿಗೆಯ ಯುವಜನರು ನಮಗಿಂತ ಹೆಚ್ಚು ಬುದ್ಧಿವಂತರಾಗಿರಬಹುದು. ಆದರೆ ಬುದ್ಧಿವಂತಿಕೆಗಿAತ ಅನುಭವ ದೊಡ್ಡದು.ಹಿರಿಯರು ಅಥವಾ ಹೆತ್ತವರು ಹೇಳುವ ಮಾತುಗಳನ್ನು ನಿರ್ಲಕ್ಷಿಸದೆ, ಜೀವನದಲ್ಲಿ ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದರು.
ವಿಜಯ ವಿಠಲ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್ ವಾಸುದೇವ ಭಟ್ ಮಾತನಾಡಿ, ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ತಕ್ಷಣ ಪೋಷಕರು ಮಕ್ಕಳಿಗೆ ಸ್ಕೂಟರ್ ಅಥವಾ ಮೊಬೈಲ್ ಕೊಡಿಸುವ ಆಮಿಷ ಒಡ್ಡುತ್ತಾರೆ. ಇದು ಪೋಷಕರಿಂದಲೇ ನಡೆಯುವ ಕಾನೂನು ಉಲ್ಲಂಘನೆಯ ಪ್ರಾರಂಭ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಉಪ ಕಾರ್ಯದರ್ಶಿ ಶ್ರೀಧರ್ ಎಂ,ಕೆ. ಮಧುಸೂಧನ್ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು