
ಮೈಸೂರು: ನಮ್ಮ ದೇಶದ ನಿಜವಾದ ಶಕ್ತಿ ಎಂದರೆ ಅದು ನಮ್ಮ ಯುವಜನತೆ ಎಂದು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಪ್ರೊ ಶಿವಕುಮಾರ್ ಹೇಳಿದರು.
ಸೋಮವಾರ ಸಿದ್ದಾರ್ಥ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಲಾಗಿದ್ದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಯುವನಿಧಿ ಕಾರ್ಯಕ್ರಮದ ಪ್ರಚಾರ ಮತ್ತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ನಮ್ಮ ರಾಜ್ಯ ಸರ್ಕಾರವು ಬಡವರ, ಶ್ರಮಿಕರ ಮತ್ತು ಮಧ್ಯಮ ವರ್ಗದ ಜನರ ಆರ್ಥಿಕ ಸ್ವಾವಲಂಬನೆಗಾಗಿ ಐದು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಂದು ಕುಟುಂಬದ ದೈನಂದಿನ ಜೀವನೋಪಾಯಕ್ಕೆ ನೆರವಾಗುವುದು ಈ ಯೋಜನೆಗಳ ಮುಖ್ಯ ಉದ್ದೇಶವಾಗಿದ್ದು, ನಿರುದ್ಯೋಗಿ ಯುವಜನತೆಗೆ ಆಸರೆಯಾಗಿರುವುದು ಸರ್ಕಾರದ 5 ನೇ ಗ್ಯಾರಂಟಿ ಯುವನಿಧಿ ಎಂದರು.
ಇಂದಿನ ದಿನಗಳಲ್ಲಿ ಪದವಿ ಮುಗಿಸಿದ ತಕ್ಷಣವೇ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುವುದು ಸುಲಃವಲ್ಲ. ಶಿಕ್ಷಣ ಮುಗಿದು ಕೆಲಸ ಸಿಗುವವರೆಗಿನ ಈ ಮಧ್ಯಂತರ ಅವಧಿಯಲ್ಲಿ ಯುವಕರು ಆರ್ಥಿಕ ಸಂಕಷ್ಟ ಅನುಭವಿಸಬಾರದು ಮತ್ತು ಅವರಲ್ಲಿ ಆತ್ಮವಿಶ್ವಾಸ ಕುಗ್ಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಈ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಯುವನಿಧಿ ಯೋಜನೆ ಪದವಿ ಹಾಗೂ ಡಿಪ್ಲೊಮಾ ಮುಗಿಸಿ ಕೆಲಸದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ಮಾಸಿಕ ಭತ್ಯೆ ನೀಡಿ ಅವರ ಭವಿಷ್ಯದ ದಾರಿಗೆ ಆಸರೆಯಾಗಿದೆ ಎಂದು ಹೇಳಿದರು.
ಈ ಐದು ಗ್ಯಾರಂಟಿ ಯೋಜನೆಗಳು ಕೇವಲ ಸರ್ಕಾರಿ ಕಾರ್ಯಕ್ರಮಗಳಲ್ಲ, ಇವು ಸಾಮಾನ್ಯ ಜನರ ಬದುಕಿಗೆ ಆರ್ಥಿಕ ಭದ್ರತೆ ನೀಡುವ ಪ್ರಮುಖ ಹೆಜ್ಜೆಗಳಾಗಿವೆ. ಕಷ್ಟದಲ್ಲಿದ್ದ ಕುಟುಂಬಗಳಿಗೆ ಬೆಂಬಲವಾಗಿ ನಿಂತು, ರಾಜ್ಯದ ಆರ್ಥಿಕತೆಯನ್ನು ಕೆಳಗಿನ ಹಂತದಿAದ ಬೆಳೆಸಲು ಇವು ನೆರವಾಗುತ್ತಿವೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಹುಣಸೂರು ಬಸವಣ್ಣ ಮಾತನಾಡಿ, ಯುವನಿಧಿ ಯೋಜನೆಯಡಿಯಲ್ಲಿ ಪದವಿ ಪೂರ್ಣಗೊಳಿಸಿ ನಿರುದ್ಯೋಗಿಗಳಾಗಿರುವ ಯುವಕ-ಯುವತಿಯರಿಗೆ ಪ್ರತಿ ತಿಂಗಳು 3,000 ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದವರಿಗೆ ಪ್ರತಿ ತಿಂಗಳು 1,500 ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ. ಈ ಸಹಾಯಧನವನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಯವರೆಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಿದರು.
ಈ ಹಣವು ಯುವಕರಿಗೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು, ತರಬೇತಿ ಪಡೆಯಲು ಹಾಗೂ ಕೆಲಸ ಹುಡುಕಲು ಉದ್ಯೋಗಾಕಾಂಕ್ಷಿಗಳಿಗೆ ಆತ್ಮನಿರ್ಭರತೆಗೆ ಆಸರೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಸಾ. ಮಾ ಯೋಗೇಶ್ ಮಾತನಾಡಿ ಉಚಿತ ಕೌಶಲ್ಯ ತರಬೇತಿ ಯುವ ನಿಧಿ ಪ್ಲಸ್ ಅಡಿಯಲ್ಲಿ ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ, ಎಲೆಕ್ಟಿçಕ್ ವೆಹಿಕಲ್ ತಂತ್ರಜ್ಞಾನ, ಸಿಎನ್‌ಸಿಮೆಷಿನ್ ತರಬೇತಿಯಂತಹ ಆಧುನಿಕ ಮಾರುಕಟ್ಟೆಗೆ ಅಗತ್ಯವಿರುವ ಉಚಿತ ಕೌಶಲ್ಯ ತರಬೇತಿಯನ್ನು ಸಂಸ್ಥೆಗಳ ಮೂಲಕ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕ ಮಂಜುನಾಥ ಕೆ.ಡಿ, ಸರ್ಕಾರಿ ಪ್ರಥಮ ದರ್ಜೆ, ಸಿದ್ದಾರ್ಥ ನಗರ ಕಾಲೇಜಿನ ಪ್ರಾಂಶುಪಾಲ ನರಸಿಂಹಮೂರ್ತಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಅಬ್ದುಲ್ ಖಾದರ್, ಕುಮಾರಿ ಲಲಿತಾ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿರೇಂದ್ರ ಉಪಸ್ಥಿತರಿದ್ದರು.