
ಮೈಸೂರು: ನಗರದಲ್ಲಿರುವ ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತವಿಜಯಾನಂದ ತೀರ್ಥ
ಸ್ವಾಮೀಜಿಯವರ 23 ನೆ ಚಾತುರ್ಮಾಸ್ಯ ವ್ರತ ದೀಕ್ಷಾ ಮಹೋತ್ಸವ ಪ್ರಯುಕ್ತ ಅನೇಕ ಸಾಮಾಜಿಕ,ಧಾರ್ಮಿಕ ಕಾರ್ಯಕ್ರಮಗಳು ಆಶ್ರಮದಲ್ಲಿ ನಿರಂತವಾಗಿ ನಡೆಯುತ್ತಿವೆ.
ಇದರ ಭಾಗವಾಗಿ ಇಂದು ಶ್ರೀ ದತ್ತ ವಿಜಯಾನಂದ ತೀರ್ಥ ಶ್ರೀಗಳ ಸಮ್ಮುಖದಲ್ಲಿ ವಿಶೇಷಚೇತನ ಮಕ್ಕಳ ಕೈನಿಂದಲೇ ಅನಘವ್ರತವನ್ನು ಮಾಡಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಮಾಡಿದ್ದು ವಿಶೇಷವಾಗಿತ್ತು.
ನಂತರ ವಿವಿಧ ಶಾಲೆಗಳ ವಿಶೇಷ ಚೇತನ ಮಕ್ಕಳಿಗೆ ಅವಧೂತ ದತ್ತ ಪೀಠದ ವತಿಯಿಂದ ಉಪಯುಕ್ತ ಸಾಧನಾ ಸಲಕರಣೆಗಳನ್ನು ವಿತರಿಸಿ, ಮಕ್ಕಳ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಲಾಯಿತು.
ರಂಗರಾವ್ ಮೆಮೋರಿಯಲ್ ಸ್ಕೂಲ್ ಫಾರ್ ಡಿಸೇಬಲ್ಡ್, ಜೆಎಸ್‌ಎಸ್ ಸಹನಾ ವಿಶೇಷ ಶಾಲೆ, ಜೆಎಸ್‌ಎಸ್ ವಿಶೇಷ ಪಾಲಿಟೆಕ್ನಿಕ್ ಟೆಕ್ನಿಕಲ್ ಇನ್ಸಿ÷್ಟಟ್ಯೂಟ್, ಕಿವುಡ ಮತ್ತು ಮೂಕ ಮಕ್ಕಳ ಸರ್ಕಾರಿ ಶಾಲೆ, ಸಾಯಿ ರಂಗ ವಿದ್ಯಾ ಸಂಸ್ಥೆ, ಕಿವುಡರ ವಸತಿ ಶಾಲೆ, ಪುಟ್ಟೀರಮ್ಮ ಕಿವುಡ ಬಾಲಕಿಯರ ವಸತಿಯುತ ವಿಶೇಷ ಶಾಲೆ, ನಿತ್ಯ ನಿರಂತರ ಅಂಧ ಮತ್ತು ಕಿವುಡ ಮಕ್ಕಳ ಟ್ರಸ್ಟ್ನ ಮಕ್ಕಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿಶೇಷ ಮಕ್ಕಳಿಗೆ ಆಶೀರ್ವಚನ ನೀಡಿ ಮಾತನಾಡಿದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ವಿಶೇಷ ಚೇತನ ಮಕ್ಕಳಿಗೆ ತಾಳ್ಮೆ, ಸಹನೆಯಿಂದ ಹೇಳಿಕೊಡಬೇಕು, ಆಗ ಅವರು ಶ್ರದ್ಧೆಯಿಂದ ಕಲಿಯುತ್ತಾರೆ ಎಂದು ತಿಳಿಸಿದರು.
ಇಚ್ಚೆ, ಕಲಿಯುವ ಮನಸ್ಸು ಇದ್ದರೆ, ಮಕ್ಕಳು ಕಲಿಯುತ್ತಾರೆ. ಕಲಿಸುವವರು ಪ್ರೀತಿಯಿಂದ ಹೇಳಿಕೊಡಬೇಕು. ಭಗವಂತ ಎಲ್ಲರಿಗೂ ಒಳಿತು ಮಾಡಲಿ,ಮಕ್ಕಳು ನಾಳೆ ಉತ್ತಮ ಪೌರರಾಗಿ ದೇಶ ಸೇವೆ ಮಾಡಲಿ. ಮನಸ್ಸಿದ್ದರೆ ಮಾರ್ಗ ಇದ್ದೇ ಇರುತ್ತದೆ,ಈ ಎಲ್ಲ ಮಕ್ಕಳಿಗೆ ಮನಸ್ಸೆಂಬ ಕಣ್ಣು,ಬಾಯಿ ಇದೆ ಅವರ ಸಾಧನೆಗೆ ಭಗವಂತ ಪರಿಪೂರ್ಣ ಅನುಗ್ರಹ ಮಾಡುತ್ತಾರೆ ಎಂದು ಹೇಳಿದರು.
ವಿಶೇಷ ಚೇತನ ಮಕ್ಕಳಿಗೆ ದಾರಿ ತೋರಿದರೆ ಸಾಧನೆ ಮಾಡಿಯೇ ಮಾಡುತ್ತಾರೆ ಎಂಬುದಕ್ಕೆ ಬೆಂಗಳೂರಿನ ವಾಗ್ದೇವಿ ಶಾಲೆ ಮಕ್ಕಳು ಉದಾಹರಣೆಯಾಗಿದ್ದಾರೆ.ಅವರು ಈಗ ಎಂಬಿಎ ಮಾಡಿ ಹುದ್ದೆ ಮಾಡುತ್ತಿದ್ದಾರೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳಿಂದ ಅನಘ ವ್ರತ ಮಾಡಿಸಲಾಗಿದೆ, ಕೇಳಿದ್ದಕ್ಕಿಂತ ಸಾವಿರ ಪಟ್ಟು ಫಲ ಸಿಗಲಿ,ನಾನು ನಿಮ್ಮಂತ ಮಕ್ಕಳ ಮುಂದೆ ಇರುವುದೇ ಮಹದಾನಂದ.ಈಗಲೇ ಚಾತುರ್ಮಾಸ್ಯ ಫಲ ಸಿಕ್ಕಷ್ಟು ಸಂತಸವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳು ನಡೆಸಿಕೊಟ್ಟ ಮಾರ್ಷಲ್ ಆರ್ಟ್,ಶ್ರೀ ಕೃಷ್ಣ ಜನನ ನೃತ್ಯರೂಪಕ,ಕೋಲಾಟ, ಭಕ್ತ ಪ್ರಹ್ಲಾದ ಸೇರಿದಂತೆ ಕೆಲ ನೃತ್ಯ ರೂಪಕಗಳನ್ನು ಸ್ವಾಮೀಜಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.