
ಮೈಸೂರು: ಅಡವಿಟ್ಟ ಚಿನ್ನವನ್ನು ಬಿಡಿಸಿ, ಮಾರುಕಟ್ಟೆ ಬೆಲೆಗೆ ಕೊಂಡು ಕೊಳ್ಳುತ್ತೇವೆ ಎಂದು ನಂಬಿಸಿ ನೂರಾರು ಮಂದಿ ‘ಗ್ರಾಹಕರಿಂದ ಪಡೆದ ಚಿನ್ನಾಭರಣಗಳನ್ನು ಕರಗಿಸಿ, ಕೋಟ್ಯಾಂತರ ರೂಗಳನ್ನು ದುರುಪಯೋಗಪಡಿಸಿಕೊಂಡು ಮೋಸ ಎಸಗಿದ ಅರೋಪ ಎದುರಿಸುತ್ತಿರುವ ‘ಡಿಜಿಎಫ್ ಗೋಲ್ಡ್ ಅಂಡ್ ಡೈಮಂಡ್’ ಮಾಲೀಕ ಸೌಂದರ್ರಾಜ್ ಅಲಿಯಾಸ್ ಚಿನ್ನತಂಬಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಬೇಕು’ ಎಂದು ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹಿಸಿದರು.
ಸೋಮವಾರ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋಸಕ್ಕೆ ಒಳಗಾದವರು ನೀಡಿದ ದೂರಿನ ಅನ್ವಯ ಚಿನ್ನತಂಬಿ ಮತ್ತು ಸಹಚರರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ಈಗ ಅವರಿಗೆ ಜಾಮೀನು ಸಿಕ್ಕಿದ್ದು, ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಇದು ದೂರುದಾರರ ಆಕ್ರೋಶಕ್ಕೆ ಕಾರಣವಾಗಿದೆ’ ಎಂದು ಹೇಳಿದರು.. ಚಿನ್ನತಂಬಿಯಿAದ ಮೋಸ ಹೋದ 75 ಮಂದಿ ನ್ಯಾಯ ಕೊಡಿಸಿ ಎಂದು ನನ್ನ ಬಳಿ ಅರ್ಜಿ ಸಲ್ಲಿಸಿದ್ದರು. ಅವರಿಗೆ ಕಾನೂನು ಪ್ರಕಾರ ನ್ಯಾಯ ಕೊಡಿಸಲೆಂದು ಹೋರಾಟ ನಡೆಸಿದ್ದೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಈಗಾಗಲೇ ಚಿನ್ನತಂಬಿಯ ಆಸ್ತಿಯನ್ನು ಗುರುತಿಸಿ, ಮುಟ್ಟುಗೋಲು ಹಾಕಿಕೊಳ್ಳುವುದಕ್ಕಾಗಿ ಮೈಸೂರು ಉಪವಿಭಾಗಾಧಿಕಾರಿಯನ್ನು ಸಕ್ಷಮ ಪ್ರಾಧಿಕಾರ ಎಂದು ನೇಮಿಸಲಾಗಿದೆ’ ಎಂದು ತಿಳಿಸಿದರು.
ಚಿನ್ನತಂಬಿ ನಂಬಿ ಚಿನ್ನ ಕಳೆದುಕೊಂಡು ನಷ್ಟ ಅನುಭವಿಸಿದ ನೂರಾರು ಜನರು ಹತಾಶರಾಗಿದ್ದಾರೆ. ಪೊಲೀಸರು, ರಾಜಕಾರಣಿಗಳು ನಮಗೆ ಸಹಾಯ ಮಾಡುತ್ತಿಲ್ಲ ಎಂಬ ಆತಂಕ ಹಾಗೂ ಅನುಮಾನ ಅವರಿಗಿದೆ. ಈ ಕಾರಣದಿಂದಲೇ ನಗರದಲ್ಲಿ ಚಿನ್ನತಂಬಿ ಒಡೆತನದ ಹೋಟೆಲ್ ಮೇಲೆ ಈಚೆಗೆ ದಾಳಿ ನಡೆಸಿದ್ದಾರೆ. ಹೀಗೆ, ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಇದರಿಂದ ನಷ್ಟವನ್ನು ಭರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮತ್ತೆ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ. ಪ್ರಕರಣವೀಗ ನ್ಯಾಯಾಲಯದಲ್ಲಿದೆ. ಹೀಗಾಗಿ, ನ್ಯಾಯಾಲಯದಿಂದ ನ್ಯಾಯ ಸಿಗುವವರೆಗೂ ದೂರುದಾರರು ಕಾಯಬೇಕಾಗುತ್ತದೆ’ ಎಂದು ಹೇಳಿದರು.
ಮೋಸ ಹೋಗಿರುವ 400ಕ್ಕೂ ಹೆಚ್ಚು ಜನರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರಿಗೆ, ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಬರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಏನೆಲ್ಲಾ ಪ್ರಕ್ರಿಯೆಗಳು ನಡೆಯುತ್ತಿವೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು. ‘ದೂರುದಾರರು ಆತಂಕಕ್ಕೆ ಒಳಗಾಗದೇ ಕಾಯಬೇಕು’ ಎಂದು ಕೋರಿದರು.600 ಕೆ.ಜಿ.ಯಷ್ಟು ಚಿನ್ನದ ವ್ಯವಹಾರ ನಡೆದಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ದೂರು ಸಲ್ಲಿಸಲಾಗಿದೆ. ಆ ಚಿನ್ನ ಎಲ್ಲಿ ಹೋಯಿತು. ಮಧ್ಯವರ್ತಿಗಳು ಯಾರು, ಎಲ್ಲೆಲ್ಲಿ ವಹಿವಾಟು ನಡೆದಿದೆ ಎಂಬುದನ್ನು ಪತ್ತೆ ಹಚ್ಚುವಂತೆ ದೂರಿನಲ್ಲಿ ಕೇಳಲಾಗಿದೆ. ಕುವೆಂಪುನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಷ್ಟೆಲ್ಲ ಮೋಸ ನಡೆದಿದ್ದರೂ. ಈವರೆಗೂ ಒಬ್ಬ ಪೊಲೀಸರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ನಡೆದಿದೆ. ಹೀಗಾಗಿ, ತನಿಖೆಗೆ ಎಸ್ಐಟಿ ರಚನೆ ಮಾಡಬೇಕು’ ಎಂದು ಒತ್ತಾಯಿಸಿದರು. ‘ಈ ವಂಚನೆ ಪ್ರಕರಣದ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನಸೆಳೆಯುತ್ತೇನೆ’ ಎಂದು ತಿಳಿಸಿದರು.