Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಮಾಜದ ಉನ್ನತಿ ಹಾಗೂ ಪರಿವರ್ತನೆಗೆ ಅಗತ್ಯವಾದ ಸಂಶೋಧನೆಗಳು ಆಗಬೇಕಾದ ಅನಿವಾರ್ಯತೆಯಿದೆ


ಮೈಸೂರು; ನಗರದ ಮಾನಸಗಂಗೋತ್ರಿಯ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದಲ್ಲಿ ಸಂಶೋಧನೆಯ ಮಹತ್ವ ಕುರಿತು ವಿಶೇಷ ಉಪನ್ಯಾಸ ಮತ್ತು ಸಂಶೋಧಕರೊAದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ರಹಮತ್ ತರೀಕೆರೆಯವರು ನೂತನ ಸಂಶೋಧನಾರ್ಥಿಗಳಿಗೆ ಸಂಶೋಧನೆಯ ರೂಪು-ರೇಷೆಗಳನ್ನು ವಿಸ್ತಾರವಾಗಿ ತಿಳಿಸಿದರು, ಮಾನವನ ಹುಟ್ಟಿನಿಂದಲೇ ಆತನ ಸಂಶೋಧನೆಯ ಗುಣವು ಜಾಗೃತವಾಗಿದೆ. ಮಾನವನ ನಾಗರೀಕತೆಯ ಉನ್ನತಿ ಹಾಗೂ ವಿಕಸನವು ಆತನ ಸಂಶೋಧನಾ ಗುಣದಿಂದಲೇ ಸಾಧ್ಯವಾಗಿದೆ. ಸಮಾಜದ ಉನ್ನತಿ ಹಾಗೂ ಪರಿವರ್ತನೆಗೆ ಅಗತ್ಯವಾದ ಸಂಶೋಧನೆಗಳು ಆಗಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.
ಸಂಶೋಧನೆ ಎಂಬುದು ದೃಷ್ಟಿಕೋನ ಬದ್ದ ಸಾಪೇಕ್ಷ ಸತ್ಯವನ್ನು ಅತ್ಯಂತ ಜಾಗರೂಕ ಮನಸ್ಸಿನಿಂದ ಕ್ರಮಬದ್ಧವಾಗಿ ಹುಡುಕುವ ಬೌದ್ಧಿಕ ಕ್ರಿಯೆ. ಹಾಗಾಗಿ ಸಂಶೋಧನೆಯು ಆಕರಗಳ ಸಂಗ್ರಹ, ಆಕರಗಳ ವಿಶ್ಲೇಷಣೆ, ವ್ಯಾಖ್ಯಾನ ಹಾಗೂ ಪ್ರಮೇಯ ನಿರ್ಮಾಣವೆಂಬ ನಾಲ್ಕು ಅತಿ ಮುಖ್ಯ ಆಯಾಮಗಳನ್ನು ಒಳಗೊಂಡಿದೆ. ಆಕರಗಳೆಂಬ ಮೊಸರನ್ನು ಬೌದ್ಧಿಕವಾಗಿ ಮಥಿಸುವ ಕ್ರಿಯೆಯೇ ವಿಶ್ಲೇಷಣೆ. ಇದರ ಉತ್ಪನ್ನವಾದ ಬೆಣ್ಣೆ-ತುಪ್ಪಗಳೇ ಸಂಶೋಧನೆಯ ಜೀವಾಳವಾದ ವ್ಯಾಖ್ಯಾನ ಮತ್ತು ಪ್ರಮೇಯಗಳು ಎಂದರು.
ಸAಶೋಧನಾ ವಿಷಯವು ಕೇವಲ ಮಾಹಿತಿ ಪ್ರಧಾನವಾಗಿರದೇ ಪರಿಕಲ್ಪನಾತ್ಮಕವಾಗಿರಬೇಕು. ಆಗ ವಿಷಯವು ಅಗತ್ಯ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳಿಗೆ ತೆರೆದುಕೊಳ್ಳುತ್ತದೆ, ಹಾಗಾಗಿ ಸಂಶೋಧಕರು ತಮ್ಮ ಸಂಶೋಧನಾ ವಿಷಯವನ್ನು ಕೇವಲ ಆರಿಸಿಕೊಳ್ಳದೇ ರೂಪಿಸಿಕೊಳ್ಳಬೇಕು. ಆಕರಗಳಿಂದಲೇ ಉಚಿತವಾದ ತಾತ್ವಿಕ ಚೌಕಟ್ಟನ್ನು ರೂಪಿಸಬೇಕು ಆಗ ಸಮಸ್ಯೆಯೊಂದಿಗೆ ಸಾವಯವ ಸಂಬAಧವನ್ನು ಸ್ಥಾಪಿಸಬಹುದು.ಹಳೆಯ ಮಾದರಿಗಳನ್ನು ಮುರಿದು ಕಟ್ಟುವ ಗುಣವು ಒಳ್ಳೆಯ ಸಂಶೋಧನೆಗೆ ಕಾರಣವಾಗುತ್ತದೆ ಎಂದು
ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಡಿದ ಕೇಂದ್ರದ ನಿರ್ದೇಶಕ ಪ್ರೊ. ಎಸ್. ನರೇಂದ್ರಕುಮಾರ್, ಸಂಶೋಧನಾರ್ಥಿಗಳಿಗೆ ತಮ್ಮ ಸಂಶೋಧನೆಯ ಮಹತ್ವದ ಅರಿವು ಅತ್ಯಂತ ಅಗತ್ಯ, ಮಾನವನ ಪ್ರಗತಿ ಇದರಲ್ಲಿ ಅಡಗಿದೆ. ವರ್ತಮಾನದ ಕೃತಕ ಬುದ್ದಿಮತ್ತೆಯ ಸಂದರ್ಭದಲ್ಲಿ ಸಂಶೋಧನೆಯಲ್ಲಿನ ನವ ಆಯಾಮಗಳನ್ನು ಹೊಸ ತಲೆಮಾರಿನ ಸಂಶೋಧಕರಿಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಉಪನ್ಯಾಸದ ಬಳಿಕ ಸಂಶೋಧಕರೊAದಿಗೆ ಸಂವಾದವನ್ನು ನಡೆಸಿದರು,. ಕೇಂದ್ರದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜೆ. ಸೋಮಶೇಖರ್, ಡಾ. ಗೋಪಾಲ್, ಡಾ. ನಿಂಗಯ್ಯ, ಡಾ. ಕಲಾವತಿ ಉಪಸ್ಥಿತರಿದ್ದರು.