
*ಜಲಾಶಯದ ನೀರಿನ ಮಟ್ಟ 3 ಅಡಿ ಕುಸಿತು, ಇದೇ ರೀತಿ ನೀರು ಹರಿಸಿದರೆ ಒಂದೇ ವಾರದಲ್ಲಿ ಡ್ಯಾಂ ಖಾಲಿ
ಮೈಸೂರು; ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಿಂದ ಒಳಹರಿವಿಗಿಂತ ಎರಡು ಪಟ್ಟು ನೀರನ್ನು ಅಧಿಕಾರಿಗಳು ನದಿಗೆ ಹರಿಬಿಡುವ ಮೂಲಕ ತಮಿಳುನಾಡಿಗೆ ಹರಿಸುತ್ತಿದ್ದಾರೆ.
ಕಾವೇರಿ ನೀರು ನಿರ್ವಹಣಾ ಸಮಿತಿ ತಮಿಳುನಾಡಿಗೆ ನಿತ್ಯವೂ ನೀರು 12 ಸಾವಿರ ಕ್ಯೂಸೆಕ್ ಅಚಿದರೆ 1 ಟಿಎಂಸಿ ನೀರನ್ನು ಹರಿಸುವಂತೆ ಈಗಾಗಲೇ ಆದೇಶಿಸಲಾಗಿದೆ. ಅದನ್ನು ಮೊದಲಿನಿಂದಲೂ ಕಬಿನಿ ಜಲಾಶಯದಿಂದಲೇ ಪಾಲಿಸಲಾಗುತ್ತಿತ್ತು. ಇದೀಗ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕುಸಿದಿದೆ. ಸದ್ಯ 7747 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆದರೆ ನದಿಗೆ 13,600 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ 2283 ಅಡಿಯಿಂದ 2280 ಅಡಿಗೆ ಅಂದರೆ ಮೂರು ಅಡಿ ಕುಸಿದಿದೆ. ಜಲಾಶಯದ ನೀರಿನ ಸಂಗ್ರಹ 17.05 ಟಿಎಂಸಿಗೆ ಇಳಿದಿದೆ. ಇದೇ ರೀತಿ ನದಿಗೆ ನೀರನ್ನು ಹರಿಸಿದರೆ ಕೇವಲ ಒಂದು ವಾರದಲ್ಲೇ ಕಬಿನಿ ಜಲಾಶಯ ಸಂಪೂರ್ಣವಾಗಿ ಖಾಲಿಯಾಗುವ ಆತಂಕ ಎದುರಾಗಿದೆ. ಯಾಕೇಂದರೆ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಮಳೆ ಪ್ರಮಾಣ ಕೇವಲ 3 ಮಿ.ಮೀಟರ್ಗೆ ಕುಸಿದಿದೆ.