
ಮೈಸೂರು; ಯುವ ಜನತೆ ರಾಷ್ಟçದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು.
ನಗರದ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಡಾ. ಅಬ್ದುಲ್ ಕಲಾಂ ರಜತ ಮಹೋತ್ಸವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ, ವಿದ್ಯಾರ್ಥಿ ಸಂಸತ್ ಮತ್ತು ಪ್ರತಿಭಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮಲ್ಲಿರುವ ಪ್ರತಿಭೆಗಳನ್ನು ನೀವು ಹಿಂಜರಿಕೆಯಿಲ್ಲದೆ ಹೊರಹಾಕಬೇಕು. ನಾನು ಶಾಲಾ ದಿನಗಳಲ್ಲೇ ಕ್ಲಾಸ್ ಮಾನಿಟರ್ ಆಗಿದ್ದರಿಂದಲೇ ಇವತ್ತು ಮಂತ್ರಿಯಾಗಲು ಸಾಧ್ಯವಾಯಿತು. ಹಾಗಾಗಿ ನೀವು ಈಗಿನಿಂದಲೇ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಿ. ರಾಷ್ಟçದ ಸತ್ಪçಜೆಗಳಾದ ಯುವಜನತೆ ದೇಶದ ಅಭಿವೃದ್ಧಿಗೆ ಪೂರಕವಾಗಿ ಸಾಧನೆ ಮಾಡುವತ್ತ ಗಮನಹರಿಸಬೇಕು, ಆಗ ಮಾತ್ರ ನಿಮ್ಮ ಬದುಕು ಸಾರ್ಥಕತೆ ಕಾಣುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರತಿಭಾ ವೇದಿಕೆಯನ್ನು ಉದ್ಘಾಟಿಸಿದ ಚಿತ್ರ ನಟಿ ಪವಿತ್ರ ಲೋಕೇಶ್ ಮಾತನಾಡಿ, ನಿಮ್ಮಲ್ಲಿ ಸತತ ಪರಿಶ್ರಮವಿದ್ದರೆ ಪ್ರತಿಯೊಬ್ಬರಿಂದಲೂ ಬೆಂಬಲ ಸಿಗುತ್ತದೆ. ಶಿಕ್ಷಕರ ಪ್ರೀತಿಯನ್ನು ಗಳಿಸುವುದು ನಿಮ್ಮ ಪರಿಶ್ರಮ ಮತ್ತು ಶಿಸ್ತಿನಿಂದ ಮಾತ್ರ ಸಾಧ್ಯ ಎಂದರು.
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಇಂದಿನ ಯುವಜನತೆ ಫೋನ್ ಬಳಕೆಯನ್ನು ಕಡಿಮೆ ಮಾಡಿ, ತಮ್ಮಲ್ಲಿರುವ ಪ್ರತಿಭೆಯ ಕಡೆ ಹೆಚ್ಚು ಗಮನ ಕೊಡಿ. ಹೆಚ್ಚೆಚ್ಚು ಕನ್ನಡ ಪುಸ್ತಕಗಳನ್ನು ಓದಿ, ಕನ್ನಡ ಪುಸ್ತಕಗಳು ನಮ್ಮ ಸಂಸ್ಕೃತಿಯ ದ್ಯೋತಕ. ಓದು ಒಂದೇ ನಮ್ಮನ್ನು ಆಂತರಿಕವಾಗಿ ಗಟ್ಟಿಗೊಳಿಸುವುದು, ಜೊತೆಗೆ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ನೀಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಜನ ವಿದ್ಯಾಸಂಸ್ಥೆಯ ಖಜಾಂಚಿ ಸಂಜಯ್ ಎಸ್.ಕೆ. ಮಾತನಾಡಿ, ವಿದ್ಯಾರ್ಥಿ ಸಂಸತ್ ನಾಯಕತ್ವದ ಮೂಲಭೂತ ತರಬೇತಿ ನೀಡಿದರೆ, ಪ್ರತಿಭಾ ವೇದಿಕೆಯು ನಿಮ್ಮಲ್ಲಿರುವ ಪ್ರತಿಭೆಗೆ ಸಾಣೆ ಹಿಡಿಯುತ್ತಾ, ವೇದಿಕೆಯ ಭಯ ಹೋಗಲಾಡಿಸಲು ನೆರವಾಗುತ್ತದೆ. ಯುವಕರೇ ದೇಶದ ನಿಜವಾದ ಶಕ್ತಿ, ದೇಶದ ಅಭಿವೃದ್ಧಿಯು ನೀವು ವಹಿಸುವ ಅಧಿಕಾರ ಮತ್ತು ಜವಾಬ್ದಾರಿಯ ಮೇಲೆ ನಿಂತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಟಿ. ವಿಜಯಲಕ್ಷ್ಮಿ ಮುರುಳೀಧರ್, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಎಸ್.ಆರ್. ರಮೇಶ್, ಪ್ರತಿಭಾ ವೇದಿಕೆಯ ಸಂಚಾಲಕ ನಾಗೇಶ ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಉಪಸ್ಥಿತರಿದ್ದರು.