
ಮೈಸೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ನ ಮೈಸೂರು ನಗರಪಾಲಿಕೆಯ ಮಾಜಿ ಸದಸ್ಯ ಲೋಕೇಶ್ ಪಿಯಾ ತಮ್ಮ ಬೆಂಬಲಿಗರೊAದಿಗೆ ನಗರದಲ್ಲಿ ಪಂಜಿನ ಮೆರವಣಿಗೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಲೋಕೇಶ್ ಪಿಯಾ, ಸಚಿವ ಬಿ.ನಾಗೇಂದ್ರ ಅವರ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಹಾಗೂ ಪ್ರತಿಭಟನೆಗಳಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಕಾರ್ಯಕ್ರಮಗಳ ವಿಚಾರದಲ್ಲಿ ಸಚಿವರ ಪರವಾಗಿ ನಿಲ್ಲುವವರ ಸಂಖ್ಯೆ ಕಡಿಮೆಯಿಲ್ಲ ಎಂಬುದನ್ನು ತೋರಿಸುವ ಉದ್ದೇಶದಿಂದ ಪಂಜಿನ ಮೆರವಣಿಗೆ ನಡೆಸಲಾಗಿದೆ ಎಂದು ಹೇಳಿದರು.
ಬಿಜೆಪಿ ಪ್ರತಿಭಟನೆ ಮಾಡಿದರೆ ಜನರ ಧ್ವನಿ ಬದಲಾಗುವುದಿಲ್ಲ. ರಾಜಕೀಯ ಕಾರಣಕ್ಕಾಗಿ ಸಚಿವ ನಾಗೇಂದ್ರ ಅವರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಅಪಪ್ರಚಾರಕ್ಕೆ ಜನರ ಮುಂದೆಯೇ ಉತ್ತರ ನೀಡುತ್ತೇವೆ. ಪಂಜಿನ ಮೆರವಣಿಗೆ ಕೇವಲ ಪ್ರತಿಭಟನೆಗೆ ಪ್ರತಿಕ್ರಿಯೆಯಲ್ಲ; ಸಚಿವ ನಾಗೇಂದ್ರ ಅವರ ಪರ ಜನಬೆಂಬಲದ ಶಕ್ತಿ ಪ್ರದರ್ಶನ” ಎಂದು ತಿಳಿಸಿದರು.
ಸಚಿವ ನಾಗೇಂದ್ರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಆರೋಪಗಳಿದ್ದರೆ ದಾಖಲೆಗಳೊಂದಿಗೆ ಮಾತನಾಡಲಿ. ಇಲ್ಲದಿದ್ದರೆ ಕೇವಲ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುವುದನ್ನು ಬಿಜೆಪಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.