
*ಜಲಾಶಯದಲ್ಲಿದ್ದ 6 ಟಿಎಂಸಿ ನೀರು ಖಾಲಿ
ಮೈಸೂರು: ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಿಂದ ನಿರಂತರವಾಗಿ ಪ್ರತಿನಿತ್ಯವೂ ತಮಿಳುನಾಡಿಗೆ ಒಂದು ಟಿಎಂಸಿ ನೀರು ಹರಿಸುತ್ತಿರುವುದರಿಂದ ಜಲಾಶಯದಲ್ಲಿದ್ದ 10 ಅಡಿ ನೀರು ಅಂದರೆ 6 ಟಿಎಂಸಿ ನೀರು ಕೇವಲ 10 ದಿನಕ್ಕೆ ಖಾಲಿಯಾಗಿದೆ. ಈ ನೀರನ್ನು ನದಿ ಮೂಲಕ ತಮಿಳುನಾಡಿಗೆ ಹರಿಸಲಾಗಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ ತೀವ್ರ ಕುಸಿತ ಕಂಡಿದೆ.
ಕೇರಳದ ವಯನಾಡು ಹಾಗೂ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಭರ್ಜರಿಯಾಗಿ ಮಳೆಯಾಗುತ್ತಿದ್ದರಿಂದ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿತ್ತು. ಆ ವೇಳೆಗಾಗಲೇ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕೆಂದು ತಮಿಳುನಾಡು ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೊರೆ ಹೋಗಿತ್ತು. ಮೊದಲು ನಿತ್ಯವೂ 3.500 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದ್ದ ಪ್ರಾಧಿಕಾರ ಆ ನಂತರ ನಿತ್ಯವೂ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ. ಇದನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಕೂಡ ಸೂಚಿಸಿದೆ. ಈ ಆದೇಶ ಈಗ ಕಬಿನಿ ಜಲಾಶಯ ಖಾಲಿಯಾಗುವುದಕ್ಕೆ ಕಾರಣವಾಗುತ್ತಿದೆ. ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದ್ದರೂ, ಜಲಾಶಯದಿಂದ ನೀರನ್ನು ತಮಿಳುನಾಡಿಗೆ ನಿತ್ಯವೂ 12 ಸಾವಿರ ಕ್ಯೂಸೆಕ್ ಹರಿಸಬೇಕಾಗಿರುವುದು ರಾಜ್ಯದ ಪಾಲಿಗೆ ಅತ್ಯಂತ ದುಬಾರಿಯಾಗುತ್ತಿದೆ. ಆದೇಶ ಪಾಲನೆಗೆ ಜಲಾಶಯದ ಅಧಿಕಾರಿಗಳು ದಿನವೂ ತಮಿಳುನಾಡಿಗೆ ಒಂದು ಟಿಎಂಸಿ ನೀರು ಹರಿಬಿಡುತ್ತಿದ್ದಾರೆ. ಜಲಾಶಯಕ್ಕೆ ಇದೀಗ 7691 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರೊಂದಿಗೆ ಜಲಾಶಯದಲ್ಲಿರುವ ನೀರಿನಲ್ಲಿ 5 ಸಾವಿರ ಕ್ಯೂಸೆಕ್ ನ್ನು ಸೇರಿಸಿ, ಒಟ್ಟು 12,940 ಕ್ಯೂಸೆಕ್ ನೀರನ್ನು ನದಿಯ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರು ದಿನೇ ದಿನೇ ಖಾಲಿಯಾಗುತ್ತಲೇ ಇದ್ದು, ನೀರಿನ ಮಟ್ಟ ಇಳಿಯುತ್ತಲೇ ಇದೆ.
ಜಲಾಶಯದ ಒಟ್ಟು ಎತ್ತರ 2284 ಅಡಿಗಳಿದ್ದು ಕಳೆದ ವಾರ ಸಂಪೂರ್ಣ ಭರ್ತಿಯಾಗಿತ್ತು. ಆದರೆ ಇದೀಗ ಕೇವಲ 2274 ಅಡಿಗೆ ನೀರಿನ ಮಟ್ಟ ಕುಸಿದಿದೆ. ಜಲಾಶಯದ ಒಟ್ಟು ಸಾಮರ್ಥ್ಯ 19.52 ಟಿಎಂಸಿ. ಜಲಾಶಯದಲ್ಲಿ ಉಳಿದಿರುವ ನೀರಿನ ಪ್ರಮಾಣ ಕೇವಲ 13.90 ಟಿಎಂಸಿ ಮಾತ್ರವಿದೆ.