
ಮೈಸೂರು: ಈ ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಬಡಾವಣೆಗಳ ನಿರ್ಮಾಣಕ್ಕೆಂದು ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳಿಗೆ ಪ್ರತಿಯಾಗಿ 50:50ರ ಅನುಪಾತದಲ್ಲಿ ನೀಡಲಾಗಿದ್ದ 1,100 ಬದಲಿ ನಿವೇಶನಗಳ ಹಂಚಿಕೆಯನ್ನು ನಗರಾಭಿವೃದ್ಧಿ ಇಲಾಖೆ ರದ್ದುಪಡಿಸಿದೆ. ಅವು ಯಾವ್ಯಾವ ನಿವೇಶನಗಳು , ಎಲ್ಲೆಲ್ಲಿ ಇವೆ ಎಂಬ ಸಂಪೂರ್ಣ ಮಾಹಿತಿಯನ್ನು ಅಧಿಸೂಚನೆ ಮೂಲಕ ಕೂಡಲೇ ಪ್ರಕಟಿಸಬೇಕು’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ಆಗ್ರಹಿಸಿದರು.
ಶನಿವಾರ ನಗರದ ಚಾಮರಾಜಪ್ಮರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಡಾದಿಂದ ಶೇ 50;50 ಅನುಪಾತದಡಿ ನಡೆದಿದ್ದ ನಿವೇಶನಗಳ ಅಕ್ರಮ ಹಂಚಿಕೆ ಕುರಿತು ಬಿಜೆಪಿಯಿಂದ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದೆವು. ಅಲ್ಲದೇ ಅಧಿವೇಶನದಲ್ಲಿ ನಾನು ಈ ಬಗ್ಗೆ ಪ್ರಶ್ನೆಯನ್ನೂ ಕೇಳಿದ್ದೆ. ಆದರೆ, ಆ ವಿಷಯವು ಸದನದಲ್ಲಿ ಚರ್ಚೆಗೆ ಬಾರದಿರಲೆಂದೇ ಬಹಳ ಬುದ್ದಿವಂತಿಕೆಯಿAದ ಸರ್ಕಾರವು ಹಂಚಿಕೆಯಾಗಿದ್ದ ಬದಲಿ ನಿವೇಶನಗಳ ಹಂಚಿಕೆಯನ್ನೇ ರದ್ದುಪಡಿಸಿ, ಅಧಿವೇಶನದ ಮುನ್ನಾ ದಿನವೇ ಆದೇಶಿಸಿದೆ’ ಎಂದು ಹೇಳಿದರು.
ನಗರಾಭಿವೃದ್ಧಿ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ, ಮುಡಾದಿಂದ ಹಂಚಿಕೆ ಮಾಡಲಾಗಿದ್ದ ಬದಲಿ ನಿವೇಶನಗಳ ಹಂಚಿ ರದ್ದು ಎಂದಷ್ಟೇ ತಿಳಿಸಲಾಗಿದೆ. ಆದರೆ ಸಾವಿರಾರು ಕೋಟಿ ರೂ ಮೌಲ್ಯದ ಈ ಅಕ್ರಮ, ಫಲಾನುಭವಿಗಳಿಗೆ ಹಾಗೂ ದರೋಡೆಯಲ್ಲಿ ಪಾಲ್ಗೊಂಡವರಿಗೆ ಅನುಕೂಲ ಕಲ್ಪಿಸುವ ರೀತಿಯಲ್ಲಿದೆ. ಹಂಚಿಕೆ ರದ್ದು ಪಡಿಸಲಾದ ಬದಲಿ ನಿವೇಶನಗಳು ಯಾವ್ಯಾವುದು, ಅವುಗಳು ಎಲ್ಲೆಲ್ಲಿ ಇವೆ ಎಂಬ ಸಂಪೂರ್ಣವಾದ ಮಾಹಿತಿಯೇ ಇಲ್ಲ. ಅಲ್ಲದೇ ಬದಲಿ ನಿವೇಶನಗಳನ್ನು ಪಡೆದಿದ್ದ ಫಲಾನುಭವಿಗಳ ಪಟ್ಟಿಯನ್ನು ಕೊಟ್ಟಿಲ್ಲ. 2023ರಿಂದಲೇ ಅನ್ವಯಿಸಿದ್ದು ಏಕೆ? ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಈ ಆದೇಶ ಮಾಡಲಾಗಿದೆಯೇ’,’ಯಾರೋ ಕೆಲವರನ್ನು ರಕ್ಷಿಸಲು ನಗರದ ಜನರೆಲ್ಲರ ಆಸ್ತಿಯನ್ನು ಬಲಿಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಅವುಗಳನ್ನು ರದ್ದುಪಡಿಸಿದಾಕ್ಷಣಕ್ಕೆ ಪ್ರಯೋಜನ ಆಗುವುದಿಲ್ಲ. ಯರ್ಯಾರು ಎಷ್ಟು ನಿವೇಶನಗಳನ್ನು ತೆಗೆದುಕೊಂಡಿದ್ದಾರೆಯೋ ಅಂಥವರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಏಕೆಂದರೆ, ಅವರೂ ಅಕ್ರಮದಲ್ಲಿ ಭಾಗಿದಾರರು ಇಲ್ಲದಿದ್ದರೆ, ಮುಂದೆ ಸರ್ಕಾರಿ ಆಸ್ತಿಯನ್ನು ರಾಜಾರೋಷವಾಗಿ ಮಾರಿಕೊಳ್ಳುತ್ತಾರೆ’ ಎಂದು ಎಚ್ಚರಿಕೆ ನೀಡಿದರು.
ಜಮೀನು ನೀಡಿದವರು ನಿಜವಾಗಿಯೂ ಪರಿಹಾರ ತೆಗೆದುಕೊಂಡಿದ್ದಾರೆಯೋ, ಇಲ್ಲವೋ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
ಮುಡಾಕ್ಕೆ ‘ಮೈಸೂರು ಖಾಸಗಿ ಅಭಿವೃದ್ಧಿ ಪ್ರಾಧಿಕಾರ’ ಅಥವಾ ‘ಅಳಿದುಳಿದ ನಿವೇಶನಗಳನ್ನು ಲೂಟಿ ಮಾಡುವ ಕೇಂದ್ರ’ ಎಂದು ಹೆಸರಿಡಬೇಕು. ಏಕೆಂದರೆ, ಬಡಾವಣೆ ಅಭಿವೃದ್ಧಿಪಡಿಸುವ ಕಾರ್ಯವನ್ನೇ ಪ್ರಾಧಿಕಾರ ಮಾಡಿಲ್ಲ’ ಎಂದು ವ್ಯಂಗ್ಯವಾಗಿ ದೂರಿದರು. ‘ಎಂಡಿಎ (ಮೈಸೂರು ಅಭಿವೃದ್ಧಿ ಪ್ರಾಧಿಕಾರ)ಗೆ ಈವರೆಗೂ ಕಾಯಂ ಆಯುಕ್ತರನ್ನು ನೇಮಿಸಿಲ್ಲವೇಕೆ?’ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಹಾನಗರ ಘಟಕದ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಇದ್ದರು