
ಮೈಸೂರು: ರಾಜ್ಯ ಸರ್ಕಾರದಲ್ಲಿ ಎರಡು ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿಯಿದ್ದರೂ, ರಾಜ್ಯ ಸರ್ಕಾರ ಅವುಗಳನ್ನು ಭರ್ತಿ ಮಾಡದೆ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಬದುಕನ್ನು ಅತಂತ್ರಗೊಳಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶೋಕ್ಗೌಡ ಆರೋಪಿಸಿದರು.
ಶುಕ್ರವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಎಸ್ ಪ್ರೊಬೇಷನರ್ಸ್ ಪರೀಕ್ಷೆಯಲ್ಲಿನ ಅನುವಾದ ದೋಷ, ಕೆಪಿಎಸ್ಸಿ ಕೈಗಾರಿಕಾ ವಿಸ್ತರಣಾಧಿಕಾರಿ ನೇಮಕಾತಿಯಲ್ಲಿ ಅಧ್ಯಕ್ಷರ ಕುಟುಂಬದ ಅಕ್ರಮ ಆಯ್ಕೆ, ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ೮೦ ಲಕ್ಷ ಲಂಚ ಹಾಗೂ ಕೆಇಎ ಪರೀಕ್ಷೆಗಳಲ್ಲಿ ಬ್ಲೂಟೂತ್ ನಕಲು ಜಾಲಕ್ಕೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.
ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿಗಳಿಗೆ ಹೆಚ್ಚಿಸಿದ್ದ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಇಳಿಕೆ ಮಾಡಿ ದ್ರೋಹ ಎಸಗಿದೆ. ದಲಿತರು, ಶೋಷಿತ ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿದ್ದ ೫೩,೯೨೬.೪೬ ಕೋಟಿಗೂ ಅಧಿಕ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ. ಗೃಹಲಕ್ಷಿ÷್ಮÃ ಯೋಜನೆಯಲ್ಲಿ ೫,೦೦೦ ಕೋಟಿಗೂ ಅಧಿಕ ಮೊತ್ತದ ಕಂತುಗಳು ಬಾಕಿ ಉಳಿದಿದ್ದು, ಸಿಎಜಿ ಲೆಕ್ಕಪರಿಶೋಧನಾ ವರದಿಯಲ್ಲಿ ನಕಲಿ ಖಾತೆಗಳಿಗೆ ಕೋಟಿಗಟ್ಟಲೆ ಹಣ ವರ್ಗಾವಣೆಯಾಗಿರುವುದು ಬಯಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ೫೨,೪೩೮ ಮಹಿಳೆಯರು ಹಾಗೂ ೭,೬೧೨ ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಕಿಡಿಕಾರಿದರು.
ಬರಗಾಲದಿಂದ ಬೆಳೆ ನಷ್ಟ ಉಂಟಾಗಿದ್ದರೂ ರೈತರಿಗೆ ಸೂಕ್ತ ನೆರವು ನೀಡದೆ ಕೇವಲ ೨,೦೦೦ ನೀಡುವ ಮೂಲಕ ಅನ್ನದಾತನಿಗೆ ಅವಮಾನ ಮಾಡಲಾಗಿದೆ. ಬಿಜೆಪಿ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ನಿಧಿ ಹಾಗೂ ವಿದ್ಯಾನಿಧಿ ಯೋಜನೆಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಬಿಡದಿ ಟೌನ್ಶಿಪ್ ಹೆಸರಿನಲ್ಲಿ ೯,೬೦೦ ಎಕರೆ ಕೃಷಿ ಭೂಮಿ ಬಲವಂತದ ಸ್ವಾಧೀನ, ಮುಡಾ ೫೦:೫೦ ನಿವೇಶನ ಹಗರಣ, ವಕ್ಸ್ ನೋಟಿಸ್ಗಳ ಮೂಲಕ ರೈತರ ಆಸ್ತಿಗಳನ್ನು ಕಬಳಿಸಲು ಯತ್ನಿಸಲಾಗುತ್ತಿದೆ ಎಂದು ಕಿಡಿ ಕಾರಿದರು.
ದರ ಏರಿಕೆ ಬರೆ: ಹಾಲು, ವಿದ್ಯುತ್, ನೀರು, ಪೆಟ್ರೋಲ್-ಡೀಸೆಲ್, ಆಸ್ತಿ ಮಾರ್ಗಸೂಚಿ ದರ ಹಾಗೂ ಸಾರಿಗೆ ದರಗಳನ್ನು ಭಾರಿ ಪ್ರಮಾಣದಲ್ಲಿ ಏರಿಸಿ ಸಾರ್ವಜನಿಕರ ಮೇಲೆ ಸತತ ಬರೆ ಎಳೆಯಲಾಗಿದೆ. ಲಕ್ಷಾಂತರ ಬಡ ಕುಟುಂಬಗಳ ಬಿಪಿಎಲ್ ಕಾರ್ಡ್ಗಳು, ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಪಿಂಚಣಿಗಳನ್ನು ರದ್ದುಗೊಳಿಸಲಾಗಿದೆ. ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ೩೭,೩೭೦ ಕೋಟಿಗೂ ಅಧಿಕ ಕಾಮಗಾರಿ ಬಿಲ್ಗಳನ್ನು ಪಾವತಿಸದೆ ಗುತ್ತಿಗೆದಾರರಿಂದ ಶೇ.೬೦ ಕಮಿಷನ್ ದಂಧೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಆಡಳಿತಾತ್ಮಕ ವೈಫಲ್ಯ, ಸರಣಿ ಹಗರಣಗಳನ್ನು ಖಂಡಿಸಿ ಬಿಜೆಪಿ ರಾಜ್ಯ ಘಟಕ ರಾಜ್ಯವ್ಯಾಪಿ ಜನಾಂದೋಲನಕ್ಕೆ ಕರೆ ನೀಡಿದೆ. ಸೆ.೧ರಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮದ ಪ್ರಮುಖ ಆರೋಪಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ರಾಯಚೂರಿನ ಲಿಂಗಸಗೂರಿನಿAದ ಬಳ್ಳಾರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ೧೮೭ ಕೋಟಿ ಪೈಕಿ ೮೯.೬೩ ಕೋಟಿ ಹಣವನ್ನು ೬೦೦ಕ್ಕೂ ಹೆಚ್ಚು ನಕಲಿ ಖಾತೆ, ಶೆಲ್ ಕಂಪನಿಗಳ ಮೂಲಕ ದರೋಡೆ ಮಾಡಲಾಗಿದೆ. ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಡೆತ್ನೋಟ್ನಲ್ಲಿ ಸಚಿವರ ನೇರ ಸೂಚನೆಯಂತೆ ಈ ಲೂಟಿ ನಡೆದಿದೆ ಎಂದು ಬಯಲು ಮಾಡಿದ್ದಾರೆ. ಅಲ್ಲದೆ ಇಡಿ, ೨೦.೧೯ ಕೋಟಿಗೂ ಅಧಿಕ ಮೊತ್ತವನ್ನು ತೆಲಂಗಾಣ ಹಾಗೂ ಬಳ್ಳಾರಿ ಚುನಾವಣೆಗಳಿಗೆ, ಐಷಾರಾಮಿ ಕಾರು, ಚಿನ್ನಾಭರಣ ಖರೀದಿಗೆ ಬಳಸಿಕೊಂಡಿದೆ. ಇಷ್ಟೆಲ್ಲಾ ಗಂಭೀರ ಆಧಾರಗಳಿದ್ದರೂ ಕಳಂಕಿತ ಬಿ.ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರ ಭ್ರಷ್ಟರಿಗೆ ಮುಕ್ತ ರಕ್ಷಣೆ ನೀಡುತ್ತಿದೆ. ಹೀಗಾಗಿ ಅವರ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ನಗರ ವಕ್ತಾರ ಮೋಹನ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಇದ್ದರು.