
ಮೈಸೂರು: ಕೇಂದ್ರ ಸರ್ಕಾರದ ನಿಯಮಗಳಂತೆ ಬರ ಅಧ್ಯಯನ ನಡೆಸಿ, ರಾಜ್ಯದ 101 ತಾಲೂಕುಗಳನ್ನು ಬರ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರವೂ ಒಂದು ತಂಡವನ್ನು ಕಳುಹಿಸಿ ಪರಿಶೀಲನೆ ನಡೆಸಲಿದೆ. ಆ ಬಳಿಕ ಪರಿಹಾರದ ಹಣ ಬಿಡುಗಡೆ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ನಮ್ಮ ಮುಂದಿರುವ ಪ್ರಮುಖ ಆದ್ಯತೆ ಜನರಿಗೆ ಕುಡಿಯುವ ನೀರು ಪೂರೈಸುವುದಾಗಿದೆ. ಜಾನುವಾರುಗಳಿಗೂ ಕುಡಿಯುವ ನೀರು ಒದಗಿಸುವುದು ಸರ್ಕಾರದ ಜವಾಬ್ದಾರಿ. ಕಳೆದ ಬಾರಿ ನ್ಯಾಯಾಲಯಕ್ಕೆ ಹೋಗಿ ಹೋರಾಟ ನಡೆಸಿದ ಬಳಿಕ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 3,500 ಕೋಟಿ ರೂಪಾಯಿ ಪರಿಹಾರ ಬಂದಿತ್ತು. ಈ ಬಗ್ಗೆಯೂ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಮನವಿ ಮಾಡುತ್ತೇವೆ ಎಂದು ನುಡಿದರು.
ಸಚಿವ ನಾಗೇಂದ್ರ ಪ್ರಕರಣ ಇದು ಪಕ್ಷಕ್ಕೆ ಖಂಡಿತವಾಗಿಯೂ ಮುಜುಗರ ಉಂಟುಮಾಡಿದೆ. ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡಿದೆ. ಎರಡು ಬಾರಿ ರಾಜೀನಾಮೆ ಕೊಡಿಸಿ ರಾಜಕೀಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ನಾಗೇಂದ್ರ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ವಾಸ್ತವವಾಗಿ ರಾಜೀನಾಮೆ ನೀಡುವ ಅವಶ್ಯಕತೆ ಇರಲಿಲ್ಲ. ಇಡಿ ಮತ್ತು ಸಿಬಿಐನಲ್ಲಿ ನಾಗೇಂದ್ರ ಅವರ ಹೆಸರು ಉಲ್ಲೇಖವಾಗಿಲ್ಲ. ನಾಗೇಂದ್ರ ಹಣ ಪಡೆದಿರುವುದಕ್ಕೆ ಯಾವುದೇ ಸಾಕ್ಷ÷್ಯವೂ ಇಲ್ಲ. ನಾನು ಗೃಹ ಸಚಿವನಾಗಿದ್ದಾಗಲೇ ಬಹುತೇಕ ಹಣ ರಿಕವರಿ ಆಗಿತ್ತು. 5 ಕೋಟಿ ರೂಪಾಯಿ ಹಣ ರಿಕವರಿ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿಯೂ ನಾಗೇಂದ್ರ ಅವರ ಹೆಸರು ಇಲ್ಲ. ಮುಂದಿನ ದಿನಗಳಲ್ಲಿ ವಸ್ತುಸ್ಥಿತಿಯನ್ನು ಜನರ ಮುಂದೆ ತಿಳಿಸುತ್ತೇವೆ. ಬಿಜೆಪಿಯವರು ಸದನದಲ್ಲಿ ಈ ಪ್ರಶ್ನೆ ಕೇಳಿ ಎಂದರೂ ಕೇಳಲಿಲ್ಲ. ಅವರು ಬರೀ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಹಗರಣ ಮುಚ್ಚಿಕೊಳ್ಳಲು ಗೃಹ ಇಲಾಖೆ ಪಡೆದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲರ ಮೇಲೂ ಆರೋಪ ಮಾಡುವುದು ಕುಮಾರಸ್ವಾಮಿ ಅವರ ಕೆಲಸವಾಗಿದೆ. ಅದಕ್ಕೆ ತಕ್ಕ ದಾಖಲೆಗಳಿದ್ದರೆ ನೀಡಲಿ. ಕಾನೂನು ಚೌಕಟ್ಟಿನಲ್ಲಿ ಏನು ಬೇಕಾದರೂ ಮಾಡಲಿ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ನನಗೂ ಒಂದೇ, ಕುಮಾರಸ್ವಾಮಿಗೂ ಒಂದೇ, ಪ್ರಿಯಾಂಕ್ ಖರ್ಗೆಗೂ ಒಂದೇ ಎಂದು ತಿರುಗೇಟು ನೀಡಿದರು.
ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸದನಕ್ಕೂ ಬಂದಿದ್ದರು. ಸದ್ಯ ಎರಡು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಬಳಿಕ ಅವರೂ ಕೂಡ ರಾಜಕೀಯ ಚಟುವಟಿಕೆಗಳನ್ನು ಆರಂಭಿಸುತ್ತಾರೆ ಎಂದು ತಿಳಿಸಿದರು.
ಮೈಸೂರಿನ ಮದರಗಹಳ್ಳಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ರೈತರಿಗೆ ನೋಟಿಫಿಕೇಶನ್ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮೈಸೂರಿನಲ್ಲಿ ಹೆಚ್ಚಿನ ಕಾರ್ಖಾನೆಗಳು ಬರಬೇಕು ಎಂಬ ಉದ್ದೇಶದಿಂದ ಕೆಐಡಿಬಿ ಭೂಮಿಗೆ ನೋಟಿಫಿಕೇಶನ್ ನೀಡಿರಬಹುದು. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಚಾಮುಂಡಿಬೆಟ್ಟಕ್ಕೆ ಭೇಟಿ; ಇದಕ್ಕೂ ಮುನ್ನಾ ಡಾ.ಜಿ.ಪರಮೇಶ್ವರ್ ಅವರು ಪತ್ನಿಯೊಂದಿಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.